ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರಿಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್

ಬೆಂಗಳೂರು,ಫೆ.2- ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರಿಗೆ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ಇಡಿ ಸಮನ್ಸ್ ಜಾರಿ ಮಾಡಿರುವ ಬೆನ್ನಲ್ಲೇ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಶೋಕಾಸ್ ನೋಟಿಸ್ ನೀಡಿದ್ದು, ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಬೇನಾಮಿ ಆಸ್ತಿ ಪ್ರಕರಣ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್, ಆರೋಪಿಗಳಾದ ಸಚಿನ್ ನಾರಾಯಣ್, ಸುನೀಲ್ ಶರ್ಮ, ಆಂಜನೇಯ ಮತ್ತು ರಾಜೇಂದ್ರ ಎಂಬುವರಿಗೆ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಇಡಿ ಸಮನ್ಸ್ ಜಾರಿ ಮಾಡಿರುವುದರಿಂದ ಎಲ್ಲರಿಗೂ ಬಂಧನದ ಭೀತಿ ಎದುರಾಗಿದೆ.

ಇಡಿ ಅಧಿಕಾರಿಗಳು ಬಂಧಿಸಬಹುದೆಂಬ ಹಿನ್ನೆಲೆಯಲ್ಲಿ ಈ ಐವರು ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ.

ಕಳೆದ ಜನವರಿ 17ರಂದೇ ಇಡಿ ಸಮನ್ಸ್ ಜಾರಿ ಮಾಡಿದ್ದು, ದೆಹಲಿಯ ಫ್ಲಾಟ್‍ವೊಂದರಲ್ಲಿ ಸಿಕ್ಕಿಬಿದ್ದ ಹಣ ಮತ್ತು ಅಕ್ರಮವಾಗಿ ಹಣವನ್ನು ವಹಿವಾಟು ಮಾಡಿರುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ದೆಹಲಿಯ ಫ್ಲಾಟ್‍ನಲ್ಲಿ ಇಡಿ-ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ 3 ಕೋಟಿಗೂ ಅಧಿಕ ನಗದು ಸಿಕ್ಕಿಬಿದ್ದಿತ್ತು. ಈ ಹಣವು ಸಚಿವ ಡಿ.ಕೆ.ಶಿವಕುಮರ್‍ಗೆ ಸೇರಿದ್ದು ಎಂಬುದು ತನಿಖೆಯಿಂದ ಗೊತ್ತಾಗಿತ್ತು.

ಹಣವನ್ನು ತಮ್ಮ ಆಪ್ತರಾದ ಸಚಿನ್ ನಾರಾಯಣ್, ಸುನೀಲ್ ಶರ್ಮ, ಆಂಜನೇಯ ಹಾಗೂ ರಾಜೇಂದ್ರ ಎಂಬುವರು ದೆಹಲಿಗೆ ಶಿವಕುಮಾರ್ ಸೂಚನೆಯಂತೆ ತೆಗೆದುಕೊಂಡು ಹೋಗಿದ್ದರು.

ವಿಚಾರಣೆ ಸಂದರ್ಭದಲ್ಲಿ ಸಿಕ್ಕಿಬಿದ್ದ ಹಣ ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದಕ್ಕೆ ಶಿವಕುಮಾರ್ ತನಿಖಾಧಿಕಾರಿಗಳಿಗೆ ಸಮಪರ್ಕ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಇಡಿ ಅಧಿಕಾರಿಗಳು ಶಿವಕುಮಾರ್ ಅವರ ತಾಯಿಯಿಂದ ಮಾಹಿತಿ ಪಡೆದಿದ್ದರು. ಇದಕ್ಕೂ ಮುನ್ನ ತನಿಖಾಧಿಕಾರಿಗಳು ಅವರ ಪತ್ನಿ ಹಾಗೂ ಪುತ್ರಿಯನ್ನು ಕೂಡ ವಿಚಾರಣೆಗೊಳಪಡಿಸಿದ್ದರು.

ತನಿಖಾಧಿಕಾರಿಗಳು ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದೇನೆ. ಜೊತೆಗೆ ತನಿಖೆಗೆ ಎಲ್ಲ ರೀತಿಯ ಸಹಕಾರವನ್ನು ಕೊಟ್ಟಿರುವುದಾಗಿ ಶಿವಕುಮಾರ್ ಹೇಳುತ್ತಿದ್ದರಾದರೂ ಇದನ್ನು ಇಡಿ ಮತ್ತು ಐಟಿಯವರು ಒಪ್ಪುತ್ತಿಲ್ಲ.

ಕೆಲ ದಿನಗಳ ಹಿಂದೆ ಐಟಿ ಇಲಾಖೆಯ ಉನ್ನತ ಮೂಲಗಳು ತಿಳಿಸಿರುವಂತೆ ಡಿ.ಕೆ.ಶಿವಕುಮಾರ 120 ಕೋಟಿಗೂ ಅಧಿಕ ಅಕ್ರಮ ಹಣವನ್ನು ಹೊಂದಿದ್ದಾರೆ ಎನ್ನಲಾಗಿದೆ.

ಪಿಎಂಎಲ್‍ಎ ಕಾಯ್ದೆ ಸೆಕ್ಷನ್ 50ರಡಿ ದೂರು ದಾಖಲಿಸಿರುವ ಇಡಿ ಅಧಿಕಾರಿಗಳು ತನಿಖೆ ವೇಳೆ ನೀವು ನೀಡಿರುವ ಮಾಹಿತಿಗೂ ಆದಾಯ ಮೂಲಕ್ಕೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಪುನಃ ವಿಚಾರಣೆಗೆ ಹಾಜರಾಗುವಂತೆ ಶಿವಕುಮಾರ್‍ಗೆ ನೋಟಿಸ್ ಜಾರಿ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ