ನವದೆಹಲಿ : ಕೇಂದ್ರ ಎನ್ಡಿಎ ಸರ್ಕಾರದ ಕೊನೆಯ ಹಾಗೂ ಮಧ್ಯಂತರ ಬಜೆಟ್ನಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಕ್ಷಣಾ ಇಲಾಖೆಗೆ ಬರೋಬ್ಬರಿ 3 ಲಕ್ಷ ಕೋಟಿ ಮೀಸಲಿಡಲಾಗಿದೆ. ಅಲ್ಲದೇ ಏಕಶ್ರೇಣಿ ಏಕ ಪಿಂಚಣಿ(OROP) ಯೋಜನೆಗೆ 35 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ.
ಯೋಧರ ನಾಲ್ಕು ದಶಕದ ಬೇಡಿಕೆಗೆ ಸ್ಪಂದಿಸಿ (OROP) ಜಾರಿಗೊಳಿಸಿದ್ದ ಸರ್ಕಾರ ಬಜೆಟ್ನಲ್ಲಿ ಬಾರಿ ಅನುದಾನ ಮೀಸಲಿಟ್ಟು ಸೈನಿಕರ ನಿವೃತ್ತಿ ಜೀವನಕ್ಕೆ ನೆರವಾಗಲು ಮುಂದಾಗಿದೆ. ಸಧ್ಯ ಭಾರತ ಜಾಗತಿಕ ಮಟ್ಟದಲ್ಲಿ ರಕ್ಷಣಾ ಇಲಾಖೆಗೆ ಅತಿ ಹೆಚ್ಚು ವ್ಯಯಿಸುವ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಎನ್ಡಿಎ ಸರ್ಕಾರದ ಅವಧಿಯಲ್ಲಿ ದೇಶದ ಭದ್ರತೆಯ ವಿಷಯದಲ್ಲಿ ಸರ್ಕಾರ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿತ್ತು. ಇದೀಗ ಬಜೆಟ್ನಲ್ಲಿ ರಕ್ಷಣಾ ಇಲಾಖೆಗೆ 3 ಲಕ್ಷ ಕೋಟಿ ಮೀಸಲಿಟ್ಟಿರುವುದರಿಂದ ಶಸ್ತಾಸ್ತ್ರ ಆಧುನೀಕರಣ, ಗಡಿ ತಡೆಗೋಡೆ ನಿರ್ಮಿಸಲು ಉಪಯೋಗವಾಗಲಿದೆ. ಕಾಶ್ಮೀರ ಭಾಗದಲ್ಲಿ ಪಾಕ್ ಉಗ್ರರ ಒಳನುಸುಳುವಿಕೆ ತಡೆಗಟ್ಟಲು ಸಹಕಾರಿಯಾಗಲಿದೆ.ಜೊತೆಗೆ ಚೀನಾ ಹಾಗೂ ಬಾಂಗ್ಲಾದೇಶದ ಗಡಿ ಪ್ರದೇಶದಲ್ಲಿ ಸೋಲಾರ್ ತಂತಿಬೇಲಿ, ಹೆಲಿಪ್ಯಾಡ್, ರಡಾರ್ ನಿರ್ಮಾಣದಂತಹ ಕಾರ್ಯಗಳಿಗೆ ನೆರವಾಗಲಿದೆ. ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ರಸ್ತೆ ಹಾಗೂ ಮೂಲಸೌಲಭ್ಯ ನಿರ್ಮಿಸಲು ಇದರಿಂದ ನೆರವಾಗಲಿದೆ. ವಿದೇಶದಿಂದ ಶಸ್ತಾಸ್ತ್ರ ಆಮದು ಕಡಿತಗೊಳಿಸಿ, ದೇಶದಲ್ಲೇ ಶಸ್ತಾಸ್ತ್ರ ನಿರ್ಮಿಸಲು ಉತ್ತೇಜನ ನೀಡಲು ಬಜೆಟ್ ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.