ಭೂಗತ ಪಾತಕಿ ರವಿ ಪೂಜಾರಿ ಬಂಧನ

ನವದೆಹಲಿ/ಬೆಂಗಳೂರು, ಫೆ.1- ಹಫ್ತಾ ವಸೂಲಿ, ಪ್ರಾಣ ಬೆದರಿಕೆ, ಗುಂಡಿನ ದಾಳಿಗಳ ಮೂಲಕ ಬಿಲ್ಡರ್‍ಗಳು ಮತ್ತು ಉದ್ಯಮಿಗಳಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದ ಭೂಗತ ಲೋಕದ ಕುಖ್ಯಾತ ಪಾತಕಿ ರವಿ ಪೂಜಾರಿಯನ್ನು ದಕ್ಷಿಣ ಆಫ್ರಿಕಾದ ಪುಟ್ಟರಾಷ್ಟ್ರ ಸೆನೆಗಲ್‍ನಲ್ಲಿ ಬಂಧಿಸಲಾಗಿದೆ.

ಇದರೊಂದಿಗೆ ಕಳೆದ 15 ವರ್ಷಗಳಿಂದ ಪೆÇಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದ ನಟೋರಿಯಸ್ ಪೂಜಾರಿ ಕೊನೆಗೂ ಸೆರೆಸಿಕ್ಕಿಬಿದ್ದಿದ್ದು, ಈತನ ಕರಾಳ ಭೂಗತ ಲೋಕದ ಮತ್ತಷ್ಟು ಪಾತಕಗಳು ಬೆಳಕಿಗೆ ಬರಲಿವೆ.

ಕೇಂದ್ರ ಅಪರಾಧ ದಳ (ಸಿಸಿಬಿ) ಪೆÇಲೀಸರಿಗೆ ಬೇಕಾಗಿದ್ದ ಕುಖ್ಯಾತ ಕ್ರಿಮಿನಲ್‍ಗಳಲ್ಲಿ ಪೂಜಾರಿ ಅಗ್ರಸ್ಥಾನದಲ್ಲಿದ್ದ.ರಿಮೋಟ್ ಕಂಟ್ರೋಲ್ ಪಾತಕಿ ಎಂದೇ ಕುಪ್ರಸಿದ್ಧನಾಗಿದ್ದ ಪೂಜಾರಿ ಅಜ್ಞಾತ ಸ್ಥಳದಲ್ಲಿದ್ದುಕೊಂಡು ಅಲ್ಲಿಂದಲೇ ಬಿಲ್ಡರ್‍ಗಳು ಮತ್ತು ಉದ್ಯಮಿಗಳಿಗೆ ದೂರವಾಣಿ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ.
ಹಫ್ತಾ ನೀಡಲು ನಿರಾಕರಿಸುತ್ತಿದ್ದ ಉದ್ಯಮಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈತನ ಅಪರಾಧ ಕೃತ್ಯಗಳು ದಾಖಲಾಗಿದ್ದವು.

ಕರ್ನಾಟಕ ಮತ್ತು ಮಹಾರಾಷ್ಟ್ರ ಪೆÇಲೀಸರು ಆತನನ್ನು ಬಂಧಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಟರ್‍ಪೆÇೀಲ್ (ಅಂತಾರಾಷ್ಟ್ರೀಯ ಪೆÇಲೀಸರು)ಗೆ ಮನವಿ ಮಾಡಿ ರೆಡ್‍ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು.

ಆಗಾಗ ವಿವಿಧ ದೇಶಗಳಿಗೆ ಪರಾರಿಯಾಗಿ ಅಲ್ಲಿ ವಾಸ್ತವ್ಯ ಹೂಡುತ್ತಿದ್ದ ಪೂಜಾರಿ ಸೆನೆಗಲ್ ದೇಶದಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತು.ವಿಶೇಷ ಪೆÇಲೀಸ್ ತಂಡ ಗೌಪ್ಯವಾಗಿ ಸೆನೆಗಲ್‍ಗೆ ತೆರಳಿ ನಟೋರಿಯಸ್ ಪಾತಕಿಯನ್ನು ಸೆನೆಗಲ್ ಪೆÇಲೀಸ್ ಇಲಾಖೆ ನೆರವಿನೊಂದಿಗೆ ಬಂಧಿಸಿದ್ದಾರೆ.
ಸೆನೆಗಲ್ ಸೇರಿದಂತೆ ಅನೇಕ ದೇಶಗಳಲ್ಲಿ ಈತ ಹೊಟೇಲ್ ಉದ್ಯಮ ಸೇರಿದಂತೆ ಅನೇಕ ವಹಿವಾಟುಗಳನ್ನು ನಡೆಸುತ್ತಿದ್ದು, ಇವುಗಳಲ್ಲಿ ಬಹುತೇಕ ವಾಮಮಾರ್ಗದ ವ್ಯವಹಾರವಾಗಿವೆ.

ಸೆನೆಗಲ್‍ನಲ್ಲಿ ವಿಚಾರಣೆಗೊಳಪಡಿಸಿದ ನಂತರ ಈತನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ.

ರಿಮೋಟ್ ರೌಡಿಸಂ: ರಿಮೋಟ್ ರೌಡಿಸಂಗೆ ಮುನ್ನುಡಿ ಬರೆದ ಮೊದಲ ಪಾತಕಿ ಎಂಬ ಕುಖ್ಯಾತಿಯೂ ಈತನದ್ದೇ. ಬೆಂಗಳೂರಿನ ಮಲ್ಲೇಶ್ವರಂನ ಮಂತ್ರಿ ಡೆವಲಪರ್ಸ್ ಮಾಲೀಕರಿಗೆ ಈ ಹಿಂದೆ ದೂರವಾಣಿ ಮಾಡಿ ಹಫ್ತಾ ವಸೂಲಿಗೆ ಬೆದರಿಕೆ ಹಾಕಿದ್ದ.ಅವರು ಹಣ ನೀಡಲು ನಿರಾಕರಿಸಿದ್ದರಿಂದ ರಾತ್ರಿ ತನ್ನ ಸಹಚರರನ್ನು ಕಳುಹಿಸಿ ಕಟ್ಟಡದ ಮೇಲೆ ಗುಂಡಿನ ದಾಳಿ ನಡೆಸಿದ್ದ.

ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ತಮ್ಮ ಪುತ್ರ ಅನೂಪ್ ರೇವಣ್ಣ ಅಭಿನಯದ ಲಕ್ಷ್ಮಣ ಸಿನಿಮಾ ನಿರ್ಮಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ದೂರವಾಣಿ ಕರೆ ಮಾಡಿ 10 ಕೋಟಿ ರೂ. ಹಫ್ತಾ ನೀಡುವಂತೆ ಬೆದರಿಕೆ ಹಾಕಿದ್ದು ಕೂಡ ಇದೇ ರವಿ ಪೂಜಾರಿ.

ಚಿಕ್ಕಪೇಟೆಯ ಅಗ್ರಮಾನ್ಯ ಎಲೆಕ್ಟ್ರಾನಿಕ್ ಉದ್ಯಮಿಯೊಬ್ಬರಿಗೆ ಇದೇ ರೀತಿ ಕರೆ ಮಾಡಿ 25 ಕೋಟಿ ರೂ. ಸುಲಿಗೆ ಹಣಕ್ಕಾಗಿ ಪೀಡಿಸಿದ್ದ. ಎರಡು ತಿಂಗಳ ಹಿಂದೆಯಷ್ಟೇ ಕೇರಳದ ಚಿತ್ರನಟಿ ಲೀನಾ ಅವರಿಗೆ ಸೇರಿದ್ದ ಬ್ಯೂಟಿಪಾರ್ಲರ್ ಮೇಲೆ ರವಿ ಪೂಜಾರಿ ಸಹಚರರು ಗುಂಡಿನ ದಾಳಿ ನಡೆಸಿ ಆತಂಕದ ವಾತಾವರಣ ಸೃಷ್ಟಿಸಿದ್ದರು.

ನಂತರ ಟೆಲಿವಿಷನ್ ಚಾನೆಲ್‍ವೊಂದಕ್ಕೆ ದೃಶ್ಯದ ತುಣುಕೊಂದನ್ನು ರವಾನಿಸಿದ ಪೂಜಾರಿ ಈ ಹತ್ಯೆ ನಡೆಸಿದ್ದು ನಾನೇ ಎಂದು ಹೇಳಿಕೊಂಡಿದ್ದ.ಈ ಘಟನೆ ನಂತರ ಆತನ ಇಬ್ಬರು ಆಪ್ತ ಸಹಚರರನ್ನು ಪೆÇಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈತ ಸೆನೆಗಲ್‍ನಲ್ಲಿರುವ ರಹಸ್ಯ ಮಾಹಿತಿ ಲಭಿಸಿತು.
ಕಾರ್ಯಪ್ರವೃತ್ತರಾದ ವಿಶೇಷ ತಂಡ ಈತನನ್ನು ಈಗ ಬಂಧಿಸುವ ಮೂಲಕ 15 ವರ್ಷಗಳ ಪಾತಕಿಯ ಕಣ್ಣಾಮುಚ್ಚಾಲೆ ಆಟಕ್ಕೆ ಅಂತಿಮ ತೆರೆ ಬಿದ್ದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ