ಕೇಂದ್ರ ಬಜೆಟ್ ತಯಾರಿ ಹಿಂದೆ 7 ಅಧಿಕಾರಿಗಳ ಪರಿಶ್ರಮ

ನವದೆಹಲಿ, ಫೆ.1-ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗೈರು ಹಾಜರಿಯಲ್ಲಿ ಹಣಕಾಸು ರಾಜ್ಯ ಸಚಿವ ಪಿಯೂಷ್ ಗೋಯಲ್ ಮಂಡಿಸಿದ 2019-20ನೇ ಸಾಲಿನ ಕೇಂದ್ರ ಬಜೆಟ್ ರೂಪಿಸುವಲ್ಲಿ 7 ಮಂದಿ ಹಿರಿಯ ಅಧಿಕಾರಿಗಳು ಅವಿರತವಾಗಿ ಶ್ರಮಿಸಿದ್ದಾರೆ.

ಕಳೆದ 15 ದಿನಗಳಿಂದಲೂ ದೇಶದ ಆರ್ಥಿಕತೆ ಗಮನದಲ್ಲಿಟ್ಟುಕೊಂಡು ಎಲ್ಲಾ ಸಂಘ-ಸಂಸ್ಥೆಗಳು, ಬ್ಯಾಂಕ್‍ಗಳು, ಉದ್ಯಮಗಳು, ಸರ್ಕಾರಿ ಔದ್ಯೋಗಿಕ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳ ಪ್ರಮುಖರ ಜೊತೆ ನಿರಂತರವಾಗಿ ಸಂಪರ್ಕ ಸಾಧಿಸಿ ಸಮಾಲೋಚನೆ ನಡೆಸಿ ಬಜೆಟ್ ತಯಾರಿಸಲಾಗಿದೆ.

ಆರ್ಥಿಕ ಸಚಿವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಬಜೆಟ್ ಸಿದ್ಧಗೊಳಿಸಬೇಕಾದ ಪರಿಸ್ಥಿತಿ ಎದುರಾದಾಗ ಉಂಟಾದ ಆತಂಕದ ವಾತಾವರಣವನ್ನು ಇದೇ ಅಧಿಕಾರಿಗಳ ತಂಡ ಸಮರ್ಪಕವಾಗಿ ನಿಭಾಯಿಸಿದೆ. ಪಿಯೂಷ್ ಗೋಯಲ್ ಅವರಿಗೆ ಹೆಗಲುಕೊಟ್ಟು ಬಜೆಟ್ ಸಿದ್ಧಪಡಿಸಿರುವವರ ಪೈಕಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿರುವ ಸುಭಾಷ್‍ಚಂದ್ರ ಗಾರ್ಗ್ ಅವರು ಬಜೆಟ್ ಸಿದ್ಧಪಡಿಸುವ ಶ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆರ್‍ಬಿಐ, ಸೆಬಿ, ವಿಶ್ವಬ್ಯಾಂಕ್ ಸೇರಿದಂತೆ ವಿವಿಧ ಸಂಸ್ಥೆಗಳ ಜೊತೆ ಇವರು ಸಂಪರ್ಕ ಸಾಧಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಆರ್ಥಿಕ ಇಲಾಖೆಯ ಕಾರ್ಯದರ್ಶಿ ಅಜಯ್‍ನಾರಾಯಣ್ ಝಾ ಅವರು, ಹೆಚ್ಚು ಮುತುವರ್ಜಿ ವಹಿಸಿದ್ದು, ಸುಮಾರು 36 ವರ್ಷ ಆಡಳಿತಾತ್ಮಕ ಅನುಭವ ಹೊಂದಿರುವ ಇವರು ಈ ಮೊದಲು ಚುನಾವಣಾ ಆಯೋಗ ಸೇರಿದಂತೆ ಹಲವಾರು ಸಂವಿಧಾನಿಕ ಸಂಸ್ಥೆಗಳಲ್ಲೂ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಆರ್ಥಿಕ ಇಲಾಖೆಯ ವೆಚ್ಚದ ವಿಭಾಗದ ನಿರ್ವಹಣೆ ನೋಡಿಕೊಳ್ಳುತ್ತಿರುವ ಅಜಯ್‍ನಾರಾಯಣ್ ಝಾ, ಖರ್ಚು-ವೆಚ್ಚಗಳ ಬಗ್ಗೆ ಪಿಯೂಷ್ ಗೋಯಲ್ ಅವರಿಗೆ ಸಮಗ್ರ ಮಾಹಿತಿ ನೀಡಿದ್ದಾರೆ.

ಕಂದಾಯ ಇಲಾಖೆಯ ಅಜಯ್‍ಭೂಷಣ್ ಪಾಂಡೆ ಅವರು ಜಿಎಸ್‍ಟಿ ನೆಟ್‍ವರ್ಕ್‍ನ ಅಧ್ಯಕ್ಷರಾಗಿದ್ದು, ಆಧಾರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಬಜೆಟ್‍ನಲ್ಲಿ ಪ್ರಮುಖ ನಿರ್ಧಾರಗಳು ಹೊರಬರಲು ಅಜಯ್‍ಭೂಷಣ್ ಪಾಂಡೆ ಅವರು ಸಹಭಾಗಿತ್ವ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಲಾಗಿದೆ.

ಅದೇ ರೀತಿ 1984ರ ಜಾರ್ಖಂಡ್ ಕೇಡರ್‍ನ ಐಎಎಸ್ ಅಧಿಕಾರಿಯಾಗಿರುವ ರಾಜೀವ್‍ಕುಮಾರ್ ಅವರು ಆರ್ಥಿಕ ಸೇವೆಗಳ ಕಾರ್ಯದರ್ಶಿಯಾಗಿದ್ದು, 21 ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್‍ಗಳ ಜೊತೆ ಚರ್ಚೆ ನಡೆಸಿ ಬಂಡವಾಳ ಹೂಡಿಕೆ, ಆರ್ಥಿಕ ಸ್ಥಿತಿ, ಸರ್ಕಾರದ ಆದ್ಯತಾ ಕ್ಷೇತ್ರಗಳ ಬಗ್ಗೆ ಬಜೆಟ್‍ಗೆ ಪೂರ್ವಭಾವಿಯಾಗಿ ವರದಿ ಸಲ್ಲಿಸಿದ್ದರು.

ಅತನು ಚಕ್ರವರ್ತಿ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿಯಾಗಿದ್ದು, ಕೇಂದ್ರ ಬಜೆಟ್ ತಯಾರಿಸುವ ಮುನ್ನ ಸರ್ಕಾರಿ ಉದ್ದಿಮೆಗಳ ಜೊತೆ ಸಭೆ ನಡೆಸಿ ಬಂಡವಾಳ ಮಾರುಕಟ್ಟೆ, ಬಂಡವಾಳ ಹಿಂತೆಗೆದ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.
ಬಜೆಟ್‍ನ್ನು ತಯಾರಿಸುವಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿಯ ಅಧ್ಯಕ್ಷರಾದ ಸುಶೀಲ್‍ಚಂದ್ರ ಅವರ ಪಾತ್ರ ಹೆಚ್ಚು ಮಹತ್ವದ್ದಾಗಿದ್ದು, ಆದಾಯ ತೆರಿಗೆ, ವೈಯಕ್ತಿಕ ಮತ್ತು ಸಂಘ-ಸಂಸ್ಥೆಗಳ ತೆರಿಗೆಯ ಪ್ರಮಾಣ, ತೆರಿಗೆಯ ಗುರಿ, ನೇರ ತೆರಿಗೆಯಿಂದ ಸಂಗ್ರಹವಾಗುವ ಸಂಪನ್ಮೂಲ, ದೇಶದ ತೆರಿಗೆ ನೀತಿ ಬದಲಾವಣೆ ಸೇರಿದಂತೆ ಹಲವಾರು ನೀತಿಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ.

ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ ಅಧ್ಯಕ್ಷರಾದ ಪ್ರಣಬ್ ಕೆ.ದಾಸ್ ಅವರು ಕೈಗಾರಿಕೆಗಳ ಹೂಡಿಕೆಯಿಂದ ಆರ್ಥಿಕತೆಯ ಮೇಲಾಗುವ ಪರಿಣಾಮಗಳು ಮತ್ತು ಸ್ಥಳೀಯ ಉತ್ಪಾದನೆಯ ಪೆÇ್ರೀ ಬಗ್ಗೆ ಹಾಗೂ ಜಾಗತಿಕವಾಗಿ ದೇಶ ಎದುರಿಸುತ್ತಿರುವ ವ್ಯವಹಾರಿಕ ಸ್ಪರ್ಧೆಯ ಬಗ್ಗೆ ಸ್ಪಷ್ಟ ಮಾಹಿತಿಯನ್ನು ರಾಜ್ಯ ಹಣಕಾಸು ಸಚಿವರಿಗೆ ಒದಗಿಸಿದ್ದಾರೆ.

ಆರ್ಥಿಕ ಇಲಾಖೆಯ ಸಲಹೆಗಾರರಾದ ಕೃಷ್ಣಮೂರ್ತಿಸುಬ್ರಹ್ಮಣ್ಯಂ ಅವರು ಎಲ್ಲ ಅಧಿಕಾರಿಗಳ ತಂಡ ಮತ್ತು ಸಿಬ್ಬಂದಿ ಜೊತೆ ಸಮನ್ವಯತೆ ಸಾಧಿಸಿ ಬಜೆಟ್‍ಗೆ ಅಂತಿಮ ರೂಪ ನೀಡುವಲ್ಲಿ ಸಹಕರಿಸಿದರು ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ