ಬೆಂಗಳೂರು,ಜ.30-ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಿಸಬೇಕೆಂದು ಒತ್ತಾಯಿಸಿ ಮದ್ಯ ನಿಷೇಧ ಆಂದೋಲನ ಸಂಘಟನೆಯ ಮಹಿಳೆಯರು ಇಂದು ರಾಜಧಾನಿ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶಿಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾದರು.
ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮಹಿಳೆಯರಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಹಿತಿ ದೇವನೂರು ಮಹದೇವ, ಮಹಿಳಾ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ನೀಡಿ ಸಂಪೂರ್ಣವಾಗಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದರು.
ಬೆಳಗ್ಗೆ 11 ಗಂಟೆಗೆ ಮಹಿಳೆಯರು ಮಲ್ಲೇಶ್ವರಂ ಕ್ರೀಡಾಂಗಣದಿಂದ ವಿಧಾನಸೌಧ ಮುತ್ತಿಗೆ ಹಾಕಲು ಹೊರಟರು. ನಿಲ್ಲಿಸಿ ನಿಲ್ಲಿಸಿ ಮದ್ಯಪಾನ ನಿಲ್ಲಿಸಿ , ಉಳಿಸಿ ಉಳಿಸಿ ಬಡಜನರ ಜೀವನ ಉಳಿಸಿ ಮುಂತಾದ ಘೋಷಣೆಗಳನ್ನು ಕೂಗುತ್ತಾ ಸ್ವಾತಂತ್ರ್ಯ ಉದ್ಯಾನಕ್ಕೆ ದಾಂಗುಡಿ ಇಟ್ಟರು.
ಬೃಹತ್ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಹೋರಾಟಗಾರರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ವಿಧಾನಸೌಧದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ನಾವು ಮನವಿ ಪತ್ರವನ್ನು ಸಲ್ಲಿಸುತ್ತೇವೆ. ಅದಕ್ಕೆ ಅವಕಾಶ ನೀಡಿ ಎಂದು ಪಟ್ಟು ಹಿಡಿದರು. ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡದಿದ್ದಾಗ ಮಾತಿನ ಚಕಮಕಿ ನಡೆಯಿತು.
ಬಳಿಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಬೇಕು. ಸರ್ಕಾರಕ್ಕೆ ಬರುವ ಆದಾಯವನ್ನು ಗಮನದಲ್ಲಿಟ್ಟುಕೊಂಡು ಉತ್ತೇಜನ ನೀಡುವುದು ಸರಿಯಲ್ಲ. ಕುಡಿತದಿಂದ ಅನೇಕ ಕುಟುಂಬಗಳು ಬೀದಿಪಾಲಾಗಿವೆ. ಜನರ ಜೀವನ ಮುಖ್ಯವೋ ಇಲ್ಲ ಆದಾಯ ಮುಖ್ಯವೋ ಎಂದು ಪ್ರಶ್ನಿಸಿದರು.
ವರ್ಷಕ್ಕೆ ಅಬಕಾರಿ ಇಲಾಖೆಯಿಂದ 15ರಿಂದ 20 ಸಾವಿರ ಕೋಟಿ ಆದಾಯ ಬರಬಹುದು. ಗ್ರಾಮೀಣ ಭಾಗಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕುಡಿತದ ಚಟಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ. ಸರ್ಕಾರಕ್ಕೆ ಆದಾಯವೇ ಮುಖ್ಯವಾಗಿದ್ದರೆ ಕುಡಿತದ ಚಟಕ್ಕೆ ಬಲಿಯಾದವರ ಕುಟುಂಬವನ್ನು ಸರ್ಕಾರ ದತ್ತು ತೆಗೆದುಕೊಳ್ಳುತ್ತದೆಯೇ? ಅವರ ಮಕ್ಕಳ ಶಿಕ್ಷಣ, ಜೀವ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಿರೇ ಎಂದು ಪ್ರಶ್ನಿಸಿದರು.
ಸಿಎಂ ವಿರುದ್ಧ ಆಕ್ರೋಶ:
ಬಳ್ಳಾರಿಯಿಂದ ಆಗಮಿಸಿದ ಶಾರದಮ್ಮ ಎಂಬ ಮಹಿಳೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಡಿಸಿದರು.
ಕಳೆದ 10 ದಿನಗಳಿಂದ ನಾವು ಚಿತ್ರದುರ್ಗದಿಂದ ಕಾಲ್ನಾಡಿಗೆಯಲ್ಲಿ ಜಾಥಾ ನಡೆಸಿಕೊಂಡು ಬೆಂಗಳೂರಿಗೆ ಬಂದಿದ್ದೇವೆ. ಕಾಲ್ನಡಿಗೆ ವೇಳೆ ರಾಯಚೂರಿನ ರೇಣುಕಮ್ಮ ಅಪಘಾತದಲ್ಲಿ ಸಾವನ್ನಪ್ಪಿದರೂ ಅವರ ಬಗ್ಗೆ ವಿಚಾರಿಸುವಷ್ಟು ಮುಖ್ಯಮಂತ್ರಿಗಳಿಗೆ ಸಮಯವಿಲ್ಲ.
ಮಗನ ಸಿನಿಮಾ ನೋಡಲು ಅವರಿಗೆ ಸಮಯವಿರುತ್ತದೆ. ಆದರೆ ನಮ್ಮಂತಹ ಬಡವರ ಬಗ್ಗೆ ಕನಿಷ್ಟ ಕಾಳಜಿಯೂ ಇಲ್ಲ. ಈ ಹಿಂದೆ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಕುಮಾರಸ್ವಾಮಿ ಅವಮಾನಿಸಿದ್ದರು.
ಇಷ್ಟು ದೊಡ್ಡ ಪ್ರಮಾಣದಲ್ಲಿ ರಾಜ್ಯಾದ್ಯಂತ ಮಹಿಳೆಯರು ಬಂದಿರುವಾಗ ಸರ್ಕಾರದ ಒಬ್ಬ ಪ್ರತಿನಿಧಿಯೂ ಕೂಡ ನಮ್ಮ ಕಷ್ಟಗಳೇನು ಎಂಬುದು ವಿಚಾರಿಸಲಿಲ್ಲ. ಮಹಿಳೆಯರ ಬಗ್ಗೆ ಈ ಸರ್ಕಾರಕ್ಕೆ ಇರುವ ಕಾಳಜಿ ಇದೇನ ಎಂದು ತರಾಟೆಗೆ ತೆಗೆದುಕೊಂಡರು.
ರಾಯಚೂರಿನ ಸರಸ್ವತಿ ಎಂಬುವರು ಮಾತನಾಡಿ, ಸಂಪೂರ್ಣವಾಗಿ ಮದ್ಯಪಾನ ನಿಷೇಧಿಸಬೇಕು. ಸರ್ಕಾರ ಲಾಭ-ನಷ್ಟವನ್ನು ನೋಡದೆ ಜನರ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಪರಿಗಣಿಸಬೇಕು. ಮುಂದಿನ ಬಜೆಟ್ನಲ್ಲಿ ಮದ್ಯಪಾನ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಲಿ ಎಂದು ಒತ್ತಾಯಿಸಿದರು.
ಪೊಲೀಸ್ ಭದ್ರತೆ:
ಇನ್ನು ವಿಧಾನಸೌಧ ಮುತ್ತಿಗೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರೀ ಬಿಗಿಬದ್ರತೆ ಕೈಗೊಳ್ಳಲಾಗಿತ್ತು. ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋಡ್ ನೇತೃತ್ವದಲ್ಲಿ ಒಬ್ಬರು ಎಸಿಪಿ , 5 ಮಂದಿ ಇನ್ಸ್ಪೆಕ್ಟರ್ ಸೇರಿದಂತೆ 250 ಮಂದಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.
ವ್ಯಾಪಕ ಬೆಂಬಲ:
ಇನ್ನು ಮದ್ಯ ನಿಷೇಧಿಸುವಂತೆ ಹೋರಾಟ ನಡೆಸಿತ್ತಿರುವ ಮಹಿಳೆಯರಿಗೆ ವ್ಯಾಪಕ ಬೆಂಬಲ ಸಿಗುತ್ತಿದೆ. ಈಗಾಗಲೇ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಸೇರಿದಂತೆ ರೈತರು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು ಸೇರಿದಂತೆ ದಲಿತ ಸಂಘಟನೆಗಳು ಬೆಂಬಲ ಸೂಚಿಸಿದವು.
ಇನ್ನೊಂದೆಡೆ ಮುಖ್ಯಮಂತ್ರಿ ಮೇಲೆ ಒತ್ತಡ ತರಲು ಆಗಲೇ ಸಾಮಾಜಿಕ ಹೋರಾಟಗಾರರಾದ ಎಸ್.ಆರ್. ಹಿರೇಮಠ್ ಹಾಗೂ ಸಾಹಿತಿ ದೇವನೂರು ಮಹಾದೇವ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮಹಿಳೆಯರ ಅಹವಾಲಿಗೆ ಸ್ಪಂದಿಸುವಂತೆ ಕೋರಿದ್ದಾರೆ.