ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ಕರ್ನಾಟಕ ದೇಶದ ರಾಜಧಾನಿಯಾಗಬೇಕು: ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯ

ಬೆಂಗಳೂರು,ಜ.30-ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ಕರ್ನಾಟಕ ದೇಶದ ರಾಜಧಾನಿಯಾಗಬೇಕು ಎಂದು ಮಧ್ಯಮ ಮತ್ತು ಭಾರೀ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಏರ್ಪಡಿಸಿದ್ದ ಎಲೆಕ್ಟ್ರಿಕ್ ವಾಹನಗಳ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ಸುಮಾರು ಎರಡು ಲಕ್ಷ ಕೋಟಿ ರೂ. ಹೂಡಿಕೆಯಾಗಿದ್ದು, ವಿಶ್ವದ ಮೂರು ಪ್ರಮುಖ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದರು.

ರೇವಾ ಸಂಸ್ಥೆ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಮುಂದಾಳತ್ವ ವಹಿಸಿತ್ತು. ಈಗ ಮಹೀಂದ್ರ ಕಂಪನಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇದರಿಂದ ರಾಜ್ಯದಲ್ಲಿ 31 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗುತ್ತಿದ್ದು, 55 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಹೇಳಿದರು.

ಇಂದಿನ ಸಮಾವೇಶದಲ್ಲಿ ತೈವಾನ್‍ನ ಕಂಪನಿ 350 ಕೋಟಿ ಬಂಡವಾಳ ಒಪ್ಪಂದಕ್ಕೆ ಸಹಿ ಹಾಕಿದೆ. ಈಗಿನ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಸ್ವಲ್ಪ ಹೆಚ್ಚಿದೆ. ಹೆಚ್ಚು ಜನ ಇದನ್ನು ಬಳಸಿದಾಗ ಬೇಡಿಕೆ ಹೆಚ್ಚಾಗುತ್ತದೆ. ಉತ್ಪಾದನೆ ಹೆಚ್ಚಾದರೆ ಬೆಲೆ ಕಡಿಮೆಯಾಗಲಿದೆ ಎಂದು ಹೇಳಿದರು.

ಎಲೆಕ್ಟ್ರಿಕ್ ವಾಹನಗಳ ತಾಂತ್ರಿಕತೆಯನ್ನು ಹಕ್ಕುಸ್ವಾಮ್ಯದ ಮೂಲಕ ಹಿಡಿದಿಟ್ಟುಕೊಂಡು ಮಾರುಕಟ್ಟೆಯ ಏಕಸ್ವಾಮತೆ ಸಾಧಿಸಲು ಅವಕಾಶವಿಲ್ಲ.

ಮುಂಜಾಗ್ರತೆಯಾಗಿ ಕರ್ನಾಟಕ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಒತ್ತು ನೀಡುತ್ತಿದ್ದು, ದೇಶೀಯವಾಗಿಯೇ ತಾಂತ್ರಿಕತೆಯ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ಕೈಗಾರಿಕೆಯಲ್ಲಷ್ಟೇ ಅಲ್ಲ ಹಲವಾರು ಕ್ಷೇತ್ರದಲ್ಲಿ ದೇಶದ ಎಲ್ಲ ರಾಜ್ಯಗಳಿಗಿಂತಲೂ ಒಂದು ಹೆಜ್ಜೆ ಮುಂದಿಡುತ್ತಿದೆ. ಮೊಟ್ಟ ಮೊದಲ ಬಾರಿಗೆ ಇಂಧನ ಉಳಿತಾಯ ನೀತಿ ಮತ್ತು ವಿದ್ಯುತ್ ಉತ್ಪಾದನಾ ನೀತಿಯನ್ನು ಜಾರಿಗೆ ತಂದಿದ್ದು ಕರ್ನಾಟಕ ಸರ್ಕಾರ. ಹೆಚ್ಚು ಬಂಡವಾಳ ಹೂಡಿಕೆಯಾಗಬೇಕು. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಕರ್ನಾಟಕ ಭಾರತದ ರಾಜಧಾನಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರ ಈ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಇನ್ನಷ್ಟು ನೆರವು ನೀಡುವ ಅಗತ್ಯವಿದೆ ಎಂದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಯುಗ ಆರಂಭವಾಗಲಿದೆ. ಪರಿಸರ ರಕ್ಷಣೆ, ಆರ್ಥಿಕ ಮಿತವ್ಯಯದಿಂದಾಗಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಸೂಕ್ತವಾಗಿವೆ. ಕರ್ನಾಟಕ ಸರ್ಕಾರ ಎಲೆಕ್ಟ್ರಿಕ್ ವಾಹನ ನಿಲುಗಡೆ ಸ್ಥಳದಲ್ಲೇ ಶೇ. 20ರಿಂದ 30ರಷ್ಟು ಜಾಗವನ್ನು ಮೀಸಲಿಟ್ಟು, ಅಲ್ಲಿ ಚಾರ್ಜಿಂಗ್ ಪಾಯಿಂಟ್‍ಗಳನ್ನು ಅಳವಡಿಸುವ ಚಿಂತನೆ ನಡೆಸಲಾಗಿದೆ. ನಗರಾದ್ಯಂತ 108 ಕಡೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‍ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ