ಅತೃಪ್ತ ಕಾಂಗ್ರೆಸ್ ಶಾಸಕರಿಂದ ಬಜೆಟ್ ಆರಂಭಕ್ಕೂ ಮುನ್ನವೇ ರಾಜೀನಾಮೆ ಸಾಧ್ಯತೆ

ಬೆಂಗಳೂರು,ಜ.30- ಬಜೆಟ್ ಅಧಿವೇಶನಕ್ಕೂ ಮುನ್ನವೇ ದೋಸ್ತಿ ಸರ್ಕಾರದಲ್ಲಿನ ದೌರ್ಬಲ್ಯಗಳನ್ನು ಬಳಸಿಕೊಂಡು ಕಾಂಗ್ರೆಸ್‍ನ ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸಿ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಮತ್ತೆ ಕೈ ಹಾಕಿದೆ.

ಸದ್ಯಕ್ಕೆ ಕಾಂಗ್ರೆಸ್-ಜೆಡಿಎಸ್ ನಡುವೆ ಭಾರೀ ವಾಕ್ಸಮರ ನಡೆಯುತ್ತಿದ್ದು, ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಮಾತ್ರ ಯಾರ ಊಹಿಸಲು ಸಾಧ್ಯವಾಗುತ್ತಿಲ್ಲ.

ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಮುನಿಸಿಕೊಂಡಿರುವ ಕೆಲವು ಕಾಂಗ್ರೆಸ್ ಶಾಸಕರಿಂದ ಬಜೆಟ್ ಆರಂಭಕ್ಕೂ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ವಿಶ್ವಾಸಮತ ಮಂಡಿಸಲು ಮುಂದಾಗಿದೆ.

ಇದಕ್ಕೆ ಪುಷ್ಠಿ ಎಂಬಂತೆ ನಿನ್ನೆ ಇದ್ದಕ್ಕಿದ್ದಂತೆ ಬೆಳಗಾವಿ ಜಿಲ್ಲೆ ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಪುನಃ ಮುಂಬೈ ಸೇರಿದ್ದಾರೆ.

ಕಾಂಗ್ರೆಸ್‍ನಿಂದ ಸಂಪೂರ್ಣವಾಗಿ ದೂರ ಉಳಿದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ ಈಗಲೂ ಕೂಡ ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ.

ಈಗಲ್ಟನ್ ರೆಸಾರ್ಟ್‍ನಲ್ಲಿ ಶಾಸಕ ಆನಂದ್‍ಸಿಂಗ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಕೂಡ ಈವರೆಗೂ ಪತ್ತೆಯಾಗಿಲ್ಲ. ಚನ್ನಪಟ್ಟಣದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಇವರ ಜೊತೆ ಇರುವುದು ಆಪರೇಷನ್ ಕಮಲ ನಡೆಯಲಿದೆ ಎಂಬುದಕ್ಕೆ ಮುನ್ಸೂಚನೆ ಸಿಕ್ಕಿದೆ.

ಮೂಲಗಳ ಪ್ರಕಾರ ಗಣೇಶ್ ಮುಂಬೈನ ರಹಸ್ಯ ಸ್ಥಳವೊಂದರಲ್ಲಿ ಸ್ಥಳೀಯ ಪೆÇಲೀಸರ ಬಿಗಿ ಭದ್ರತೆಯೊಂದಿಗೆ ವಾಸ್ತವ್ಯಹೂಡಿದ್ದಾರೆ ಎನ್ನಲಾಗುತ್ತಿದೆ.

ನಾಲ್ವರು ಶಾಸಕರ ರಾಜೀನಾಮೆ:
ಫೆ.8ರಂದು ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನಕ್ಕೂ ಮುನ್ನವೇ ಮೊದಲ ಹಂತದಲ್ಲಿ 4ರಿಂದ 6 ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇದೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ, ಉಮೇಶ್ ಜಾಧವ್, ಪ್ರತಾಪ್‍ಗೌಡ ಪಾಟೀಲ್ ಅವರುಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಮೊದಲ ಹಂತದಲ್ಲಿ ಆರು ಶಾಸಕರು ರಾಜೀನಾಮೆ ನೀಡಿದರೆ ಮುಂದಿನ ದಿನಗಳಲ್ಲಿ ಅತೃಪ್ತ ಶಾಸಕರು ಸ್ವಯಂಪ್ರೇರಿತರಾಗಿ ಬಂದು ರಾಜೀನಾಮೆ ನೀಡಲಿದ್ದಾರೆ ಎಂಬ ಆಶಾಭಾವನೆ ಬಿಜೆಪಿಯಲ್ಲಿದೆ.

ಕಡೆಪಕ್ಷ 10ರಿಂದ 12 ಶಾಸಕರನ್ನು ಗುರಿಯಾಗಿಟ್ಟುಕೊಂಡು ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಯತ್ನಕ್ಕೆ ಬಿಜೆಪಿ ಕೈ ಹಾಕಿದೆ. ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ 118 ಶಾಸಕರ ಬೆಂಬಲವನ್ನು ಹೊಂದಿದೆ. ಇಬ್ಬರು ಪಕ್ಷೇತರ ಶಾಸಕರು ಬೆಂಬಲವನ್ನು ಹಿಂತೆಗೆದುಕೊಂಡು ಬಿಜೆಪಿಗೆ ಬೆಂಬಲ ನೀಡಿರುವುದಾಗಿ ಸೂಚಿಸಿರುವುದರಿಂದ ಕಮಲ ಪಕ್ಷದ ಸಂಖ್ಯೆ 106ಕ್ಕೇರಿದೆ.

ಒಂದಿಷ್ಟು ಶಾಸಕರು ರಾಜೀನಾಮೆ ಕೊಟ್ಟರೆ, ಬಳಿಕ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅಡ್ಡ ಮತದಾನ ಮಾಡಿಸುವುದು ಇಲ್ಲವೇ ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರು ಹಾಜರಾಗುವಂತೆ ನೋಡಿಕೊಳ್ಳುವ ಲೆಕ್ಕಾಚಾರ ಬಿಜೆಪಿಯದು.

10 ಶಾಸಕರು ರಾಜೀನಾಮೆ ಕೊಟ್ಟರೆ ದೋಸ್ತಿ ಸರ್ಕಾರದ ಸಂಖ್ಯೆ 108ಕ್ಕೆ ಬರುತ್ತದೆ. ವಿಶ್ವಾಸ ಮತಯಾಚನೆ ವೇಳೆ ಅತೃಪ್ತ ಶಾಸಕರನ್ನು ಸದನಕ್ಕೆ ಬಾರದಂತೆ ನೋಡಿಕೊಂಡರೆ ಸಾಕು ಬಹುಮತ ಕೊರತೆಯಿಂದಾಗಿ ಸರ್ಕಾರ ಪತನವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದೆ ಬಿಜೆಪಿ.

ಮಂಗಳವಾರ ಬೆಳಗ್ಗೆ ನಂದಿಬೆಟ್ಟಕ್ಕೆ ತೆರಳಿದ್ದ ಬಿಜೆಪಿಯ ಹಲವು ಶಾಸಕರು ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ರಚಿಸುವ ಕುರಿತು ಮಾತುಕತೆ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಸಿಎಂ ಸ್ಥಾನ ತೊರೆಯುವುದಾಗಿ ಹೇಳಿದ್ದರು.

ಇದರ ಬೆನ್ನಲೇ ಎರಡು ಪಕ್ಷಗಳ ಶಾಸಕರ ನಡುವೆ ಮಾತಿಗೆ ಮಾತು ಬೆಳೆಯುತ್ತಿದೆ. ಯಾರಿಗೇನು ನಾವು ಕಡಿಮೆ ಇಲ್ಲ ಎಂಬಂತೆ ದೋಸ್ತಿಗಳ ಪಕ್ಷಗಳ ಮುಖಂಡರೇ ನಾನು ಮೇಲು , ನೀನು ಮೇಲೋ ಎಂಬಂತೆ ಮಾತನಾಡುತ್ತಿದ್ದಾರೆ.

ಇದೆಲ್ಲವನ್ನು ಮೌನದಿಂದಲೇ ಗಮನಿಸುತ್ತಿರುವ ಬಿಜೆಪಿ, ಬಜೆಟ್‍ಗೂ ಮುನ್ನ ಆಪರೇಷನ್ ಮೌನ ಕ್ರಾಂತಿ ಮೂಲಕ ಮೈತ್ರಿ ಸರ್ಕಾರದ ಬುಡಕ್ಕೆ ಬೆಂಕಿ ಹಚ್ಚಲು ಸಜ್ಜಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ