ಬೆಂಗಳೂರು, ಜ.29-ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಇಂದು ಸಂಜೆ ನಡೆಯಲಿರುವ ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸಂಜೆ ಜೆ.ಪಿ.ಭವನದಲ್ಲಿ ನಡೆಯಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಡ್ಯಾನಿಷ್ ಆಲಿ, ಕೇರಳದ ಸಚಿವ ಮ್ಯಾಥ್ಯೂ ಥಾಮಸ್ ಅಲ್ಲದೆ ಸಚಿವರು, ಸಂಸದರು, ಶಾಸಕರು ಪಕ್ಷದ ರಾಷ್ಟ್ರ ಮತ್ತು ರಾಜ್ಯದ ಪದಾಧಿಕಾರಿಗಳು, ವಿವಿಧ ರಾಜ್ಯದ ಪಕ್ಷದ ಅಧ್ಯಕ್ಷರು ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಸರ್ಕಾರದ ಆಡಳಿತ ಕಾರ್ಯವೈಖರಿ ಸೇರಿದಂತೆ ರಾಜಕೀಯ, ಆರ್ಥಿಕ ನಿರ್ಣಯಗಳನ್ನು ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಆಡಳಿತದಲ್ಲಿ ಜನರು ಎದುರಿಸುತ್ತಿರುವ ಸಂಕಷ್ಟ, ದೇಶದ ಪ್ರಚಲಿತ ಸಮಸ್ಯೆಗಳು, ರಾಜಕೀಯ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುತ್ತದೆ.
ಕೇಂದ್ರ ಸರ್ಕಾರದ ಕಾರ್ಯವೈಖರಿ ಕುರಿತಂತೆ ರಾಜಕೀಯ ನಿರ್ಣಯ ಕೈಗೊಳ್ಳಲಿರುವ ಜೆಡಿಎಸ್, ಗರಿಷ್ಠ ಮುಖಬೆಲೆಯ ನೋಟು ಅಮಾನೀಕರಣದಿಂದ ಬಡವರು ಎದುರಿಸಿದ ಸಂಕಷ್ಟ, ಅವರು ಬದುಕು ದುಸ್ತರವಾಗಿರುವುದು ಹಾಗೂ ಚುನಾವಣಾ ಪೂರ್ವದಲ್ಲಿ ನೀಡಿದಂತಹ ಭರವಸೆಗಳು ಈಡೇರದೆ ಜನರಿಗೆ ಭ್ರಮನಿರಸನ ಉಂಟಾಗಿದೆ ಎಂದು ಆರೋಪಿಸುತ್ತಿರುವ ಜೆಡಿಎಸ್ ಈ ಬಗ್ಗೆ ಆರ್ಥಿಕ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು, ರಾಜ್ಯದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಬೇಕಾಗಿರುವ ಕಾರ್ಯತಂತ್ರಗಳ ಬಗ್ಗೆಯೂ ಕಾರ್ಯಕಾರಿಣಿಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ.ಪ್ರಾದೇಶಿಕ ಪಕ್ಷಗಳ ಒಕ್ಕೂಟದ ಜೊತೆಗೂಡಿ ಲೋಕಸಭೆ ಚುನಾವಣೆಯನ್ನು ಎದುರಿಸುವುದು.ಚುನಾವಣೆ ನಂತರ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದಿದ್ದೇ ಆದರೆ ಯಾವ ರೀತಿ ಪಕ್ಷದ ಹಾಗೂ ರಾಜಕೀಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ.
ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದು, ಜಾರಿಗೊಳಿಸಿರುವ ರೈತರ ಸಾಲ ಮನ್ನಾ, ಬಡವರ ಬಂಧು ಯೋಜನೆಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ.
ಅಲ್ಲದೆ ಮೈತ್ರಿ ಸರ್ಕಾರದಲ್ಲಿನ ಇಕ್ಕಟ್ಟು-ಬಿಕ್ಕಟ್ಟುಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ಪಕ್ಷವನ್ನು ಯಾವ ರೀತಿ ಸಂಘಟಿಸಬೇಕು, ಮೈತ್ರಿ ಧರ್ಮ ಪಾಲನೆಯೊಂದಿಗೆ ಸರ್ಕಾರವನ್ನು ಮುನ್ನಡೆಸುವ ಬಗ್ಗೆಯೂ ಗಂಭೀರ ಸಮಾಲೋಚನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಐತಿಹಾಸಿಕ ಸಮ್ಮೇಳನ: ನಗರದ ಅರಮನೆ ಮೈದಾನದಲ್ಲಿ ನಾಳೆ ಮಧ್ಯಾಹ್ನ ಬೃಹತ್ ಸಮ್ಮೇಳನ ನಡೆಸುವ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಸಲಿದೆ.
ಬೃಹತ್ ಸಮ್ಮೇಳನದ ಸಿದ್ಧತಾ ಕಾರ್ಯ ಭರದಿಂದ ಸಾಗಿದ್ದು, ಪಕ್ಷದ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಉದ್ದೇಶಿಸಲಾಗಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಸುತ್ತಿರುವ ಬೃಹತ್ ಸಮ್ಮೇಳನ ಇದಾಗಿದೆ. ಇತ್ತೀಚೆಗಷ್ಟೇ ಅಲ್ಪಸಂಖ್ಯಾತರ ಸಮ್ಮೇಳನವನ್ನು ನಡೆಸಲಾಗಿತ್ತು.
ಮುಂಬರುವ ಲೋಕಸಭೆ ಚುನಾವಣೆ ಸಿದ್ಧತೆ ಹಾಗೂ ಪಕ್ಷ ಸಂಘಟನೆ ಉದ್ದೇಶದಿಂದ ಸಮ್ಮೇಳನ ನಡೆಸಲಾಗುತ್ತಿದೆ. ಸಮ್ಮೇಳನದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರು ಪಾಲ್ಗೊಂಡು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.