ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸುತ್ತ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿ ಮೂಲ ಮಾಲೀಕರಿಗೆ ವಾಪಸ್ ನೀಡಲು ಮುಂದಾದ ಕೇಂದ್ರ

ನವದೆಹಲಿ: ವಿವಾದಿತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂಮಿಯ ಸುತ್ತ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ ಹೆಚ್ಚುವರಿ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

ರಾಮ ಜನ್ಮಭೂಮಿ-ಬಾಬ್ರಿ ಮಸೀದಿಯ 2.77 ಎಕರೆ ವಿವಾದಿತ ಭೂಮಿಯ ಸುತ್ತ ದೇಗುಲ ನಿರ್ಮಾಣಕ್ಕಾಗಿ ಒಟ್ಟು 67ಕ್ಕೂ ಹೆಚ್ಚು ಎಕರೆ ಭೂಮಿಯನ್ನು 1991ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈಗ ಈ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಲು ರಾಮ ಜನ್ಮಭೂಮಿ ನ್ಯಾಸ್​ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡ ಭೂಮಿಯನ್ನು ಹಿಂದಿರುಗಿಸಲು ಸಮ್ಮತಿಸಿದೆ ಎಂದು ಕೇಂದ್ರ ಸರ್ಕಾರ ತನ್ನ ಅರ್ಜಿಯಲ್ಲಿ ತಿಳಿಸಿದೆ.

ಅಯೋಧ್ಯೆಯಲ್ಲಿ ದೇಗುಲ ನಿರ್ಮಾಣಕ್ಕಾಗಿ ಶಿಲಾ ಪೂಜೆಯನ್ನು ಏರ್ಪಡಿಸಲು ಅನುಮತಿ ನಿರಾಕರಿಸಿದ್ದ ಸುಪ್ರೀಂಕೋರ್ಟ್​, 2003ರಲ್ಲಿ ವಿವಾದಿತ ಭೂಮಿ ಮತ್ತು 67ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಆದರೆ, ರಾಮ ಜನ್ಮಭೂಮಿ ನ್ಯಾಸ್​ ಬಳಿಯಿರುವ 67ಕ್ಕೂ ಹೆಚ್ಚು ಎಕರೆ ಭೂಮಿ ವಿವಾದರಹಿತವಾಗಿರುವ ಕಾರಣ, ಅದನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಲು ಯಾವುದೇ ಅಡ್ಡಿಯಿಲ್ಲ ಎಂದು ಕೇಂದ್ರ ಅರ್ಜಿಯಲ್ಲಿ ವಿವರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ