ಪುಸ್ತಕಗಳು ಇಂದು ನಡುಮನೆಯನ್ನು ಬಿಟ್ಟು ಹಿತ್ತಲಮನೆ ಸೇರುತ್ತಿವೆ: ಕವಿ ಕೆ.ಎಸ್.ನಿಸಾರ್ ಅಹಮದ್

ಬೆಂಗಳೂರು, ಜ.29-ಯುವಪೀಳಿಗೆ ಕಂಪ್ಯೂಟರ್ ಹಾಗೂ ಮೊಬೈಲ್‍ನಂತಹ ಆಧುನಿಕ ತಂತ್ರಜ್ಞಾನದಲ್ಲಿ ಸಿಲುಕಿರುವುದು ಒಂದೆಡೆಯಾದರೆ, ವಿಜ್ಞಾನ ತಂತ್ರಜ್ಞಾನದ ಪ್ರಭಾವ ಪುಸ್ತಕ ಪ್ರಕಾಶನದಲ್ಲೂ ಛಾಪು ಮೂಡಿಸಿರುವುದರಿಂದ ಅತ್ಯುತ್ತಮ ರೀತಿಯಲ್ಲಿ ಮುಖಪುಟಗಳು ಹೊರಬರುತ್ತಿರುವುದು ತಾಂತ್ರಿಕ ಉನ್ನತಿಗೆ ಸಾಕ್ಷಿಯಾಗಿದೆ ಎಂದು ಕವಿ ಕೆ.ಎಸ್.ನಿಸಾರ್‍ಅಹಮದ್ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಂದೆಡೆ ತಂತ್ರಜ್ಞಾನ ಯುವಸಮುದಾಯವನ್ನು ಓದಿನಿಂದ ವಿಮುಖರನ್ನಾಗಿಸುತ್ತಿದ್ದಾರೆ, ಇನ್ನೊಂದೆಡೆ ತಾಂತ್ರಿಕತೆ , ಮುಖಪುಟ ವಿನ್ಯಾಸದಂತಹ ಕೌಶಲ್ಯಕ್ಕೆ ಮೆರುಗು ನೀಡುತ್ತಿದೆ ಎಂದರು.

ಪುಸ್ತಕಗಳು ಇಂದು ನಡುಮನೆಯನ್ನು ಬಿಟ್ಟು ಹಿತ್ತಲಮನೆ ಸೇರುತ್ತಿರುವುದು ಸಾಹಿತ್ಯ ಕೃತಿಗೆ ಒದಗಿದ ದುಃಸ್ಥಿತಿ ಎಂದು ವಿಷಾದಿಸಿದರು.

ಸಾಹಿತಿ ಕೆ.ಮರುಳಸಿದ್ಧಪ್ಪ ಮಾತನಾಡಿ, ಪ್ರಶಸ್ತಿಗಾಗಿ ಲಾಬಿ, ಒತ್ತಡ ಅಧಿಕಗೊಳ್ಳುತ್ತಿದೆ.ನ್ಯಾಯಯುತವಾಗಿ ಪ್ರಶಸ್ತಿಗಳು ಯಾರಿಗೆ ನೀಡಬೇಕೆಂಬುದರ ಬಗ್ಗೆ ಆಯ್ಕೆ ಸಮಿತಿಗಳು ತೀರ್ಮಾನಿಸಿದರೆ ಪ್ರಶಸ್ತಿಗಳಿಗೂ ಗೌರವ ದೊರೆತಂತಾಗುತ್ತದೆ.ದೇಶದ ಅತ್ಯುನ್ನತ ಪ್ರಶಸ್ತಿಗಳು ಇಂದು ಚರ್ಚೆಗೆ ವಿಷಯವಾಗಿದೆ ಎಂದು ಪ್ರತಿಪಾದಿಸಿದರು.

ಪ್ರತಿ ಪ್ರಕಾಶನವೂ ಒಂದು ವಿಶ್ವವಿದ್ಯಾನಿಲಯವಿದ್ದಂತೆ ಎಂದು ಶ್ಲಾಘಿಸಿದರು.

ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಸ್ವೀಕರಿಸಿದ ಜಯದೇವ ಮೆಣಸಗಿ ಮಾತನಾಡಿ, ಮೇಲ್ನೋಟಕ್ಕೆ ಮಾತ್ರ ಪ್ರಕಾಶನ ಕ್ಷೇತ್ರ ಉತ್ತಮ ಸ್ಥಿತಿಯಲ್ಲಿದೆ ಎಂದು ಭಾಸವಾಗುತ್ತದೆ.ಆದರೆ ಪ್ರಕಾಶಕರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ ಎಂದು ನುಡಿದರು.

2017ನೇ ಸಾಲಿನ ಪುಸ್ತಕ ಸೊಗಸು- ಮುದ್ರಣ ಸೊಗಸು – ಸುವರ್ಣ ಪಬ್ಲಿಕೇಷನ್‍ನ ವಿಶ್ವನಾಥ್ ಸುವರ್ಣ ಅವರಿಗೆ ಮೊದಲ ಬಹುಮಾನ, ಎಸ್.ಗುರುಮೂರ್ತಿ-ದ್ವಿತೀಯ ಬಹುಮಾನ ಹಾಗೂ ತೃತೀಯ ಬಹುಮಾನ ಸಿವಿಜೆ ಬುಕ್ಸ್ ಚನ್ನವೀರೇಗೌಡ ಅವರಿಗೆ ಲಭಿಸಿದೆ.

ನ.ರವಿಕುಮಾರ್‍ಗೆ ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಕೃಷ್ಣ ಗಿಳಿಯಾರ್ ಮುಖಪುಟ ಚಿತ್ರ ವಿನ್ಯಾಸ ಬಹುಮಾನ, ಷ.ಶೆಟ್ಟರ್ ಅವರಿಗೆ ಡಾ.ಎಂ.ಎಂ.ಕಲ್ಬುರ್ಗಿ ಮಾನವೀಯ ಅಧ್ಯಯನ ಪ್ರಶಸ್ತಿ, ಎಚ್.ಗಿರಿಜಮ್ಮ ಅವರಿಗೆ ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ, ವಿದ್ಯಾನಿಧಿ ಪ್ರಕಾಶನದ ಜಯದೇವ ಮೈ ಮೆಣಸಗಿ ಅವರಿಗೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ, ಸ್ವ್ಯಾನ್ ಪ್ರಿಂಟರ್ಸ್ ನ ಎಂ.ಕೃಷ್ಣಮೂರ್ತಿಗೆ ಮುದ್ರಣ ಸೊಗಸು ಬಹುಮಾನ, ಎಸ್‍ಎಲ್‍ಎನ್ ಪಬ್ಲಿಕೇಷನ್‍ನ ಉಮೇಶ್ ನಾಗಮಂಗಲ ಅವರಿಗೆ ಮಕ್ಕಳ ಪುಸ್ತಕ ಸೊಗಸು ಬಹುಮಾನ, ಗಿರಿಧರ ಕಾರ್ಕಳ ಅವರಿಗೆ ಮುಖಪುಟ ಚಿತ್ರಕಲೆ ಬಹುಮಾನ, ಜೆ.ಅರುಣ್‍ಕುಮಾರ್ -ಮುಖಪುಟ ಚಿತ್ರ ವಿನ್ಯಾಸ ಬಹುಮಾನವನ್ನು ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ, ಸದಸ್ಯೆ ಜಯದೇವಿ ಗಾಯಕವಾಡ, ಪ್ರಾಧಿಕಾರದ ಸದಸ್ಯ ಪಾತಣ್ಣ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ