ಬೆಂಗಳೂರು, ಜ.23- ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬದುಕಿದ್ದರೆ ಭಾರತದ ಭವಿಷ್ಯವೇ ಬೇರೆ ರೀತಿ ಬದಲಾಗುತ್ತಿತ್ತು ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದರು.
ನೇತಾಜಿ ಸುಭಾಷ್ ಚಂದ್ರಬೋಸ್ ಅವರ 122ನೇ ಜಯಂತಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನೇತಾಜಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇತಾಜಿ ಅಪ್ರತಿಮ ದೇಶ ಭಕ್ತ. ಇಡೀ ದೇಶ ಅವರಿಗೆ ಗೌರವ ಸಲ್ಲಿಸುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾಗಾಂಧೀಜಿ ಅಹಿಂಸಾ ಮಾರ್ಗ ಹಿಡಿದರೆ, ನೇತಾಜಿ ತಮ್ಮದೇ ದಾರಿ ಆಯ್ದುಕೊಂಡರು. ಇಬ್ಬರ ಉದ್ದೇಶ ಒಂದೇ ಆಗಿತ್ತು. 200 ವರ್ಷಗಳ ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸುವಲ್ಲಿ ನಿರಂತರ ಹೋರಾಟ ನಡೆಸಿದರು ಎಂದರು.
ನೇತಾಜಿ ಅವರ ಅಂತ್ಯಕಾಲದ ಇತಿಹಾಸದ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಆದರೆ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡ ನೇತಾಜಿಯವರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. 1938ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು ಎಂದು ತಿಳಿಸಿದರು.
ನೇತಾಜಿಯವರ ಜನ್ಮ ದಿನವನ್ನು ದೇಶ ಪ್ರೇಮ ದಿವಸ್ ಎಂದು ಆಚರಿಸಬೇಕು ಎಂಬುದು ಸೇರಿದಂತೆ ನೇತಾಜಿ ರೀಸರ್ಚ್ ಆ್ಯಂಡ್ ಮಲ್ಟಿಡೆವಲಪ್ಮೆಂಟ್ ಟ್ರಸ್ಟ್ ನೀಡಿದ್ದ ಹಲವಾರು ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಪರಮೇಶ್ವರ್ ಹೇಳಿದರು.