ಗಣೇಶ್ ಬಂಧನವಾಗುವರೆಗೂ ಡಿಸ್ಚಾರ್ಜ್ ಆಗಲ್ಲ! ಆನಂದ್ ಸಿಂಗ್

ಬೆಂಗಳೂರು,ಜ.23-ಈಗಲ್ಟನ್ ರೆಸಾರ್ಟ್‍ನಲ್ಲಿ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಸದ್ಯ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಮಯ ಬಂದಿದ್ದರೂ ಗಣೇಶ್ ಬಂಧನವಾಗುವವರೆಗೂ ಡಿಸ್ಚಾರ್ಜ್ ಆಗಲ್ಲ ಎಂದು ಆನಂದ್ ಸಿಂಗ್ ಪಟ್ಟು ಹಿಡಿದಿದ್ದಾರೆ.

ಒಂದೆಡೆ ಕಾಂಗ್ರೆಸ್ ಶಾಸಕರಾದ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ನಡುವಿನ ಮನಸ್ತಾಪವನ್ನು ಬಗೆಹರಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಲೇ ಇದ್ದಾರೆ. ಇನ್ನೊಂದೆಡೆ ಆನಂದ್ ಸಿಂಗ್ ಕುಟುಂಬಸ್ಥರು ಕಂಪ್ಲಿ ಗಣೇಶ್ ಬಂಧನಕ್ಕೆ ಒತ್ತಡ ಹೇರುತ್ತಿದ್ದಾರೆ. ಮಾರಣಾಂತಿಕ ಹಲ್ಲೆ ನಡೆಸಿರುವ ಶಾಸಕ ಗಣೇಶ್ ಅವರನ್ನು ಬಂಧಿಸಲೇಬೇಕು ಎಂದು ಅವರು ಹಠ ಹಿಡಿದಿದ್ದಾರೆ.

ತಮ್ಮ ಮೇಲೆ ಎಫ್‍ಐಆರ್ ದಾಖಲಾಗಿರುವುದು ತಿಳಿಯುತ್ತಿದ್ದಂತೆ ಕಂಪ್ಲಿ ಶಾಸಕ ಗಣೇಶ್ ತಲೆಮರೆಸಿಕೊಂಡಿದ್ದಾರೆ. ಅವರು ಎಲ್ಲಿದ್ದಾರೆಂದು ಹುಡುಕಲು ಪೆÇಲೀಸರು ಪ್ರಯತ್ನ ಮಾಡುತ್ತಿದ್ದಾರೆ.É ಅಜ್ಞಾತ ಸ್ಥಳ ಸೇರಿಕೊಂಡಿರುವ ಗಣೇಶ್ ಹೇಗಾದರೂ ಮಾಡಿ ಈ ಪ್ರಕರಣದಿಂದ ಹೊರಬರಲು ಕಸರತ್ತು ನಡೆಸಿದ್ದಾರೆ.
ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ್ದ ಗಣೇಶ್, ಇಬ್ಬರ ನಡುವೆ ಸಣ್ಣಪುಟ್ಟ ಅಸಮಾಧಾನಗಳು ಇದ್ದಿದ್ದು ಸತ್ಯ. ಅದಕ್ಕೆ ಸಣ್ಣ ಜಗಳವಾಗಿದ್ದೂ ನಿಜ. ಆದರೆ, ನಾನು ಆನಂದ್ ಸಿಂಗ್ ಮೇಲೆ ಕೈ ಮಾಡಿಲ್ಲ. ಬಾಟಲಿಯಿಂದ ಹೊಡೆದಿದ್ದೇನೆ ಎಂಬುದೆಲ್ಲ ಸುಳ್ಳು ಸುದ್ದಿ. ನಾನೇನೂ ತಪ್ಪು ಮಾಡಿಲ್ಲ. ಆದರೆ, ನನ್ನಿಂದ ಆನಂದ್ ಸಿಂಗ್ ಕುಟುಂಬದವರಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರು.

ಕೋಪದಲ್ಲಿ ಏನೋ ಆಗಿ ಹೋಗಿದೆ. ನಾನು ಅಣ್ಣನ ಕ್ಷಮೆ ಕೇಳುತ್ತೇನೆ ಎಂದು ರಾಜಿಸಂಧಾನದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಲು ಗಣೇಶ್ ಮುಂದಾಗಿದ್ದಾರೆ. ಜಮೀರ್ ಮೂಲಕ ಗಣೇಶ್ ಸಂಧಾನಕ್ಕೆ ಯತ್ನಿಸಿದ್ದಾರೆ. ಆನಂದ್ ಸಿಂಗ್ ಒಪ್ಪುವುದಾದರೆ ಆಸ್ಪತ್ರೆಗೆ ಗಣೇಶ್ ಅವರನ್ನು ಕರೆದುಕೊಂಡು ಬಂದು ಕ್ಷಮೆ ಕೇಳಿಸುತ್ತೇನೆ ಎಂದು ಜಮೀರ್ ನಾಯಕರ ಜೊತೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆನಂದ್ ಸಿಂಗ್ ಪ್ರತಿಜ್ಞೆ: ಶಾಸಕ ಗಣೇಶ್ ಅರೆಸ್ಟ್ ಆಗಬೇಕು. ಅಲ್ಲಿಯವರೆಗೆ ನಾನು ಆಸ್ಪತ್ರೆಯಿಂದ ಹೊರಬರುವುದಿಲ್ಲ ಎಂದು ಆನಂದ್ ಸಿಂಗ್ ಪ್ರತಿಜ್ಞೆ ಮಾಡಿದ್ದಾರಂತೆ. ಈಗ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೆ ಗಣೇಶ್‍ಗೆ ಜಾಮೀನು ಸಿಗುತ್ತದೆ. ಹೀಗಾಗಿ ಗಣೇಶ್ ಅರೆಸ್ಟ್ ಆಗುವವರೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದಲಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ನಿರೀಕ್ಷಣಾ ಜಾಮೀನು ಪಡೆಯಲು ಗಣೇಶ್ ತೆರೆಮರೆಯಲ್ಲೇ ಸಿದ್ಧತೆ ನಡೆಸುತ್ತಿದ್ದು,  ಇವರಿಗೆ ನಿರೀಕ್ಷಣಾ ಜಾಮೀನು ಸಿಗಬಾರದು  ಎಂಬ ಕಾರಣಕ್ಕೆ ಆನಂದ್ ಸಿಂಗ್ ಇನ್ನೆರಡು ದಿನ ಆಸ್ಪತ್ರೆಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಒಂದು ವೇಳೆ ಆಸ್ಪತ್ರೆಯಿಂದ ಆನಂದ್ ಸಿಂಗ್ ಡಿಸ್ಚಾರ್ಜ್ ಆದರೆ,  ಗಣೇಶ್‍ಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆನಂದ್ ಸಿಂಗ್ ಈ ತಂತ್ರ  ಮಾಡಿದ್ದಾರೆ ಎನ್ನಲಾಗಿದೆ.

ಪ್ರತಿಭಟನೆ ಬೇಡ : ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡ ಅಭಿಮಾನಿಗಳು ಇಂದು ಹೊಸಪೇಟೆ ಬಂದ್‍ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂದ್ ಮಾಡಬಾರದೆಂದು ಆನಂದ ಸಿಂಗ್ ತಮ್ಮ ಬೆಂಬಲಿಗರಿಗೆ ಮನವಿ ಮಾಡಿಕೊಂಡಿದ್ದಾರೆ.
ಆನಂದ್ ಸಿಂಗ್ ಸಂದೇಶ ಹೀಗಿದೆ?!

ಇತ್ತೀಚೆಗೆ ನನ್ನ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ತಿಳಿದ ನಂತರ ತಾವು ಮನ ನೊಂದಿದ್ದೀರೆಂಬುದು ನನಗೆ ಗೊತ್ತು. ನನ್ನ ಮೇಲೆ ತಾವು ಅಭಿಮಾನ, ಪ್ರೀತಿ, ಕರುಣೆ ತೋರಿದ್ದೀರಿ. ನನ್ನ ಮೇಲೆ ಹಲ್ಲೆಯಂತಹ ಘಟನೆ ನಡೆದ ನಂತರ ನನ್ನ ಅರೋಗ್ಯದ ಬಗ್ಗೆ ಕಾಳಜಿ ವಹಿಸಿ ಪ್ರಾಥನೆಗಳನ್ನು ಕೂಡಾ ಮಾಡಿದ್ದೀರಿ. ಅದಕ್ಕಾಗಿ ತಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳನ್ನು ಈ ಮೂಲಕ ತಿಳಿಯ ಬಯಸುತ್ತೇನೆ.

ನನ್ನ ಮೇಲೆ ನೀವು ಇಟ್ಟಿರುವ ಪ್ರೀತಿ ವಿಶ್ವಾಸ ಹೀಗೆ ಮುಂದುವರೆಯಲಿ. ಆದ್ರೆ ನನ್ನ ವಿಶೇಷ ಮನವಿ ಏನೆಂದರೆ, ಯಾರೂ ಕೂಡ ಹೊಸಪೇಟೆ ಬಂದ್‍ನಂತಹ ಯಾವುದೇ ಕಾರ್ಯಕ್ರಮಗಳನ್ನು ಅಯೋಜನೆ ಮಾಡಬಾರದು.

ಯಾವುದೆ ಅಹಿತಕರ ಘಟನೆಗಳು ಜರುಗದಂತೆ ಎಲ್ಲರನ್ನು ಪ್ರೀತಿಯಿಂದ, ವಿಶ್ವಾಸದಿಂದ, ಸ್ನೇಹ ಪೂರ್ವಕವಾಗಿ ಕಾಣಿರಿ. ನನ್ನ ಅಭಿಮಾನಿಗಳಾದ ತಾವು ಯಾರೂ ಕೂಡ ಅನ್ಯತಾ ಭಾವಿಸದೇ ಹೊಸಪೇಟೆ ಬಂದ್‍ನಂತಹ ಕಾರ್ಯಕ್ರಮ ಮಾಡಬಾರದೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಆನಂದ್ ಸಿಂಗ್ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ