ಗಣೇಶ್ ಅವರ ಮೇಲೆ ಈಗಾಗಲೇ ಎಫ್‍ಐಆರ್ ದಾಖಲಾಗಿದೆ. ಪೊಲೀಸರು ಕೈಕಟ್ಟಿ ಕುಳಿತಿಲ್ಲ. ಎಂ.ಬಿ.ಪಾಟೀಲ್

ಬೆಂಗಳೂರು, ಜ.23- ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಗಣೇಶ್ ಅವರ ಮೇಲೆ ಈಗಾಗಲೇ ಎಫ್‍ಐಆರ್ ದಾಖಲಾಗಿದೆ. ಪೊಲೀಸರು ಕೈಕಟ್ಟಿ ಕುಳಿತಿಲ್ಲ. ಗಣೇಶ್ ಅವರ ಹುಡುಕಾಟ ನಡೆಸುತ್ತಿದ್ದಾರೆ. ಶೀಘ್ರವೇ ಬಂಧಿಸಲಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರವಾಗಲಿ, ನಾವಾಗಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗಲಾಟೆ ಪ್ರಕರಣದ ಬಗ್ಗೆ ಆರಂಭದಲ್ಲಿ ಮಾಹಿತಿ ಇರಲಿಲ್ಲ. ಹಾಗಾಗಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ಮಂದಿ ಬೇರೆ ರೀತಿ ಹೇಳಿಕೆ ನೀಡಿದ್ದರು. ಆದರೆ, ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ನಾನು ಹಾಗೂ ಇತರರು ಆಸ್ಪತ್ರೆಗೆ ಭೇಟಿ ನೀಡಿ ಆನಂದ್‍ಸಿಂಗ್ ಅವರನ್ನು ನೋಡಿದ ಬಳಿಕ ಈ  ಕೃತ್ಯದ ಅರಿವಾಯಿತು. ಕುಟುಂಬದ ಸದಸ್ಯರು ಆತಂಕ ಮತ್ತು ಗೊಂದಲದಲ್ಲಿದ್ದರು. ಪೊಲೀಸ್ ದೂರು ದಾಖಲಿಸುವಂತೆ ನಾವುಗಳೇ ಸಲಹೆ ನೀಡಿದ್ದೆವು. ಅದರಂತೆ ದೂರು ದಾಖಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಗಣೇಶ್ ಅವರನ್ನು ಅಮಾನತುಗೊಳಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಈ ವಿಚಾರದಲ್ಲಿ ಸರ್ಕಾರವಾಗಲಿ, ಪಕ್ಷವಾಗಲಿ ಯಾವುದೇ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಘಟನೆ ನಡೆದಾಗ ಸ್ಥಳದಲ್ಲಿದ್ದ ಶಾಸಕ ತನ್ವೀರ್‍ಸೇಠ್ ಮತ್ತು ಸಚಿವ ಇ.ತುಕಾರಾಂ ಮತ್ತಿತರರು ಪ್ರಕರಣಕ್ಕೆ ಸಾಕ್ಷಿದಾರರಾಗಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ