ಬೆಂಗಳೂರು,ಜ.23- ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಅಭಿನವ ಬಸವಣ್ಣ, ಕರ್ನಾಟಕ ರತ್ನ, ತುಮಕೂರಿನ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಕ್ರಿಯಾಸಮಾಧಿಗೆ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗಿದ್ದಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವಿಟರ್ನಲ್ಲಿ ಪ್ರಧಾನಿ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಪರಮೇಶ್ವರ್, ಮೋದಿಯವರು ಸೆಲೆಬ್ರಿಟಿಗಳ ಮದುವೆ ಸಮಾರಂಭಕ್ಕೆ ಹಾಜರಾಗುತ್ತಾರೆ. ಚಲನಚಿತ್ರ ನಟ-ನಟಿಯರನ್ನು ಭೇಟಿಯಾಗಲು ಅವರಿಗೆ ಸಮಯವಿರುತ್ತದೆ.
ಜೀವನಪೂರ್ತಿ ಬಡವರು, ದೀನದಲಿತರು, ಮಧ್ಯಮ ವರ್ಗದವರಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅವರ ಶ್ರೇಯಸ್ಸಿಗೆ ಶ್ರಮಿಸಿದ ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿಯವರ ಕ್ರಿಯಾ ಸಮಿತಿಗೆ ಬರಲು ಮೋದಿ ಅವರಿಗೆ ಸಮಯ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಶ್ರೀಗಳ ಸಮಾಜಸೇವೆಯನ್ನು ಪರಿಗಣಿಸಿ ಕರ್ನಾಟಕ ಜನತೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡುವಂತೆ ಹಲವಾರು ಬಾರಿ ಮನವಿ ಮಾಡಿಕೊಡಲಾಗಿತ್ತು. ಆದರೆ ನಮ್ಮ ಮನವಿಗೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕೂಡ ಅತ್ಯಂತ ನೋವು ತಂದಿದೆ ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಗೈರು ಆಗಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.