ಶಾಸಕರ ನಡುವಿನ ಗಲಾಟೆ ನಾಚಿಕೆಗೇಡಿನ ಪ್ರಕರಣ : ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್

ಬೆಂಗಳೂರು, ಜ.23-ನೇತಾಜಿ ಸುಭಾಷ್ ಚಂದ್ರಬೋಸ್ ಅವರ 122ನೇ  ಜಯಂತಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನೇತಾಜಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಪ್ರತಿಜ್ಞೆ ಸ್ವೀಕಾರದ ನಂತರ  ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು, ಶಾಸಕರ ನಡುವಿನ ಗಲಾಟೆ ನಾಚಿಕೆಗೇಡಿನ ಪ್ರಕರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಆನಂದ್‍ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ. ಅದನ್ನು ಆಧರಿಸಿ ತನಿಖೆ ನಡೆಯುತ್ತಿದೆ. ಶೀಘ್ರವೇ ಗಣೇಶ್‍ರನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಜರುಗಿಸಲಾಗುತ್ತದೆ. ಇದರಲ್ಲಿ ಯಾವುದೇ ಮುಲಾಜಿಲ್ಲ ಎಂದು ಹೇಳಿದರು.

ಗಲಾಟೆಗೆ ಕಾರಣರಾದ ಶಾಸಕ ಗಣೇಶ್‍ರನ್ನು ಕಾಂಗ್ರೆಸ್ ಪಕ್ಷ ಅಮಾನತು ಮಾಡಿದೆ. ಹೆಚ್ಚಿನ ತನಿಖೆಗಾಗಿ ನನ್ನ ಅಧ್ಯಕ್ಷತೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಕೃಷ್ಣಬೈರೇಗೌಡ ಅವರನ್ನೊಳಗೊಂಡ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ನಾವು ತನಿಖೆ ಮಾಡಿ ಪೂರ್ಣಗೊಳಿಸಿದ ನಂತರ ಸತ್ಯಾಸತ್ಯತೆ ಆಧರಿಸಿ ಕ್ರಮ ಜರುಗಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಈ ಘಟನೆ ನಡೆಯಬಾರದಿತ್ತು. ನಾನು 30 ವರ್ಷಗಳಿಂದಲೂ ರಾಜಕೀಯ ಜೀವನದಲ್ಲಿದ್ದೇನೆ. ಎಂದಿಗೂ ಇಂತಹ ಕೀಳುಮಟ್ಟದ ರಾಜಕಾರಣ ನೋಡಿರಲಿಲ್ಲ. ನಾವು 25 ವರ್ಷದ ಯುವಕರನ್ನು ರಾಜಕಾರಣಕ್ಕೆ ಸೇರುವಂತೆ ಆಹ್ವಾನ ಮಾಡುತ್ತಿದ್ದೇವೆ. ಆದರೆ, ಈ ರೀತಿಯ ಘಟನೆಗಳಿಂದ ರಾಜಕಾರಣದ ಮೌಲ್ಯಗಳು ಹಾಳಾಗುತ್ತಿವೆ. ನಾವು ಹೊಸದಾಗಿ ರಾಜಕಾರಣ ಸೇರಬಯಸುವವರಿಗೆ ಯಾವ ಸಂದೇಶ ನೀಡಲು ಸಾಧ್ಯ ಎಂದು ಹೇಳಿದರು.

ಆನಂದ್‍ಸಿಂಗ್ ಮತ್ತು ಗಣೇಶ್  ಇಬ್ಬರೂ ಯುವಕರೇ. ಅವರ ಈ ನಡವಳಿಕೆ ಸರಿಯಲ್ಲ. ಗಣೇಶ್ ಸೇರಿದಂತೆ ಐದು ಮಂದಿ ಶಾಸಕರು ಬಿಜೆಪಿ ಸೇರಲು ಸಿದ್ಧರಿದ್ದಾರೆ ಎಂಬ ಸುದ್ದಿಗಳು ಕೇವಲ ವದಂತಿ. ಕಾಂಗ್ರೆಸ್ ಪಕ್ಷವನ್ನು ಯಾರೂ ಬಿಟ್ಟು ಹೋಗುತ್ತಿಲ್ಲ. ಒಂದು ವೇಳೆ ಗಣೇಶ್ ಅಥವಾ ಇನ್ಯಾರಾದರೂ ಪಕ್ಷ ಬಿಡುತ್ತಾರೆ ಎಂಬುದು ಖಚಿತವಾದರೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಕ್ರಿಯಾಸಮಾಧಿ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಬೇಕಿತ್ತು ಎಂದು ಪರಮೇಶ್ವರ್ ಇದೇ ವೇಳೆ ಅಭಿಪ್ರಾಯಪಟ್ಟರು. ಈ ವಿಷಯದಲ್ಲಿ ಯಾವುದೇ ರಾಜಕಾರಣ ಇಲ್ಲ. ಆದರೆ, ಕ್ರಿಯಾ ಸಮಾಧಿ ವೇಳೆ ಪ್ರಧಾನಿ ಅವರು ಭಾಗವಹಿಸಬೇಕಿತ್ತು ಎಂಬುದು ಜನಸಾಮಾನ್ಯರ ಅಭಿಪ್ರಾಯ. ನರೇಂದ್ರ ಮೋದಿ ಅವರ ಬಗ್ಗೆ ವೈಯಕ್ತಿಕವಾಗಿ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಪ್ರಧಾನಿಯಾಗಿ ಅವರು ಕ್ರಿಯಾಸಮಾಧಿ ವೇಳೆ ಭಾಗವಹಿಸಿದ್ದರೆ ಅವರಿಗೆ ಘನತೆ ಹೆಚ್ಚಾಗುತ್ತಿತ್ತು ಎಂದು ಹೇಳಿದರು.

ನಿನ್ನೆ ಶೋಕಾಚರಣೆ ಜಾರಿಯಿದ್ದರೂ ಕೆಲವು ಶಾಲಾ-ಕಾಲೇಜುಗಳು ಕರ್ತವ್ಯ ನಿರ್ವಹಿಸಿರುವ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಇಲಾಖೆಯವರ ಜತೆ ಚರ್ಚೆ ಮಾಡಿ ಅದನ್ನು ಪರಿಶೀಲಿಸುತ್ತೇನೆ. ಆದರೆ, ಕೆಲವರು ಸಿದ್ದಗಂಗಾ ಶ್ರೀಗಳು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಆದರ್ಶಗಳನ್ನು ತಮ್ಮ ಜೀವಮಾನವಿಡಿ ಪಾಲಿಸಿಕೊಂಡು ಬಂದಿದ್ದಾರೆ. ಅವರಿಗೆ ಗೌರವ ನೀಡುವ ಸಲುವಾಗಿ ತಾವು ರಜೆ ಘೋಷಿಸದೆ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. ವಾದ-ವಿವಾದಗಳೇನಿದ್ದರೂ ಪರಿಶೀಲನೆಯ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ