ಅಪಾಯದ ಅಂಚಿನಲ್ಲಿರುವ ಮರಗಳ ತೆರವಿಗೆ ಮುಂದಾದ ಬಿಬಿಎಂಪಿ

ಬೆಂಗಳೂರು,ಜ.23-ನಗರದ ಹಲವಾರು ಪ್ರದೇಶಗಳಲ್ಲಿ ರಸ್ತೆಬದಿ ಮರಗಳು ಹಳೆಯದಾಗಿದ್ದು, ಅದು ಯಾವಾಗ ಮುರಿದು ಬಿದ್ದು ಸಾವು-ನೋವು ತಂದೊಡ್ಡುವುದೋ ಎಂಬ ಆತಂಕ ಉಂಟಾಗಿದೆ.

ಕಳೆದ ಬಾರಿ ಮಳೆ ಬಂದಾಗ ಮರ ಉರುಳಿ ಸಾವು ಸಂಭವಿಸಿರುವ ಘಟನೆಗಳು ಕಣ್ಣ ಮುಂದಿವೆ. ಇನ್ನೇನು ಬೇಸಿಗೆ ಪ್ರಾರಂಭವಾಗಲಿದ್ದು, ಗಾಳಿಯ ರಭಸಕ್ಕೆ ರೋಗಗ್ರಸ್ಥ ಹಾಗೂ ಆಯುಷ್ಯ ಮುಗಿದ ಮರಗಳು ಯಾವಾಗಾದರೂ ಉರುಳಬಹುದು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಹಳೆಯ ಮರಗಳ ಮಾರಣ ಹೋಮಕ್ಕೆ ಮುಂದಾಗಿದೆ. ಕೂಡಲೇ ನಗರದ ಎಲ್ಲ ಭಾಗದಲ್ಲಿ ಪರಿಶೀಲನೆ ನಡೆಸಿ ಅಳಿವಿನಂಚಿನಲ್ಲಿರುವ ಮರಗಳ ಪಟ್ಟಿ ಮಾಡಿ ವರದಿ ನೀಡಬೇಕೆಂದು ಮೇಯರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಳೆ ಬಂದಾಗ ಉಂಟಾಗುವ ಅವಾಂತರ ತಡೆಯಲು ಎಚ್ಚೆತ್ತುಕೊಂಡಿರುವ ಪಾಲಿಕೆ ಅಪಾಯದ ಅಂಚಿನಲ್ಲಿರುವ ಮರಗಳನ್ನು ಅಧಿಕಾರಿಗಳು ವರದಿ ನೀಡಿದ ಕೂಡಲೇ ತೆರವುಗೊಳಿಸಲು ನಿರ್ಧರಿಸಿದೆ.

ನಗರದಲ್ಲಿ ಯಾವ ಯಾವ ಜಾತಿಯ  ಮರಗಳಿವೆ, ಅವುಗಳಲ್ಲಿ ಔಷಧೀಯ ಮರಗಳು ಎಷ್ಟು, ಅವುಗಳ ಜೀವಿತಾವಧಿ ಎಷ್ಟು ಎಂಬುದರ ಬಗ್ಗೆ ಸರ್ವೆ ಮಾಡಬೇಕು. ಅದರಲ್ಲಿ  ಅಳಿವಿನಂಚಿನಲ್ಲಿರುವ ಮರಗಳ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿ ಒಂದು ವಾರದೊಳಗೆ ಮರಗಳ ಪೂರ್ಣ ವರದಿ ನೀಡುವಂತೆ ಮೇಯರ್  ಆದೇಶಿಸಿದ್ದಾರೆ.
ಇದ್ದಕ್ಕಿದ್ದಂತೆ ಮರಗಳು ಉರುಳಿ ವಾಹನ ಸವಾರರಿಗೆ ತೊಂದರೆಯಾಗುವುದು, ವಾಹನಗಳು ಜಖಂಗೊಳ್ಳುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.

ಇದಕ್ಕೆ ಉದಾಹರಣೆ ಎಂಬಂತೆ ನಗರದ ರಿಂಗ್ ರಸ್ತೆಯಲ್ಲಿ ಬೆಳಗಿನ ಜಾವ 1.55ರಲ್ಲಿ ಮರ ಉರುಳಿಬಿದ್ದು, ಕಾರು ಜಖಂಗೊಂಡಿತ್ತಲ್ಲದೆ ಇತರೆ ವಾಹನಗಳು ಸಂಚರಿಸಲು ತೊಂದರೆ ಉಂಟಾಗಿತ್ತು. ತಕ್ಷಣ ಬಾಣಸವಾಡಿ ಸಂಚಾರಿ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಧಾವಿಸಿ ಉರುಳಿಬಿದ್ದ ಮರವನ್ನು ಕತ್ತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮರ ಉರುಳಿ ಕಾರು ಚಾಲಕ ಹಾಗೂ ಪ್ರಯಾಣಿಕ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ