ಬಿಜೆಪಿ ಕದ ತಟ್ಟಿ ಬಂದ ಕಾಂಗ್ರೆಸ್ ಶಾಸಕರಿಗೆ ಭರ್ಜರಿ ಗಿಫ್ಟ್!

ಬೆಂಗಳೂರು: ಬಿಜೆಪಿಯ ಸಂಕ್ರಾಂತಿಯ ಮಹಾಕ್ರಾಂತಿ ವಿಫಲವಾಗಿದೆ. ಬಿಜೆಪಿ ನಾಯಕರ ಕೆಲವು ತಪ್ಪುಗಳಿಂದಾಗಿಯೇ ಆಪರೇಷನ್ ಕಮಲ ಫೇಲ್ ಆಯ್ತು ಎಂಬ ಮಾತುಗಳು ಕೇಳಿ ಬಂದಿವೆ. ಇನ್ನು ಮೂರ್ನಾಲ್ಕು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಅತೃಪ್ತ ಶಾಸಕರಿಗೆ ಭರ್ಜರಿ ಗಿಫ್ಟ್ ಸಿಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಭವಿಷ್ಯದಲ್ಲಿ ಉತ್ತಮ ಸ್ಥಾನ-ಮಾನ ಸಿಗಲಿದೆ ಎಂಬ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಶಾಸಕರು ಕೇವಲ ಬಿಜೆಪಿಯ ಬಾಗಿಲು ತಟ್ಟಿ ಬಂದರು ಎನ್ನಲಾಗುತ್ತಿದೆ.

ಶಾಸಕರಾದ ಗಣೇಶ್, ಭೀಮಾನಾಯಕ್, ಬಸವರಾಜ್ ದದ್ದಲ್, ಪ್ರತಾಪ್ ಗೌಡ ಪಾಟೀಲ್, ಸೀಮಂತ ಪಾಟೀಲ್ ಸೇರಿದಂತೆ 5ಕ್ಕೂ ಹೆಚ್ಚು ಶಾಸಕರು ಬಂಡಾಯದ ಬಾವುಟ ಕೆಳಗಿಟ್ಟಿದ್ದಾರೆ. ಒಂದೂವರೆ ವರ್ಷದ ಬಳಿಕ ಸಂಪುಟದಲ್ಲಿ ಸ್ಥಾನ ನೀಡಲಾಗುವದು. ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ನಿಗಮ ಮಂಡಳಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇರಲಿದೆ ಎಂಬ ಭರವಸೆಗಳು ಕಾಂಗ್ರೆಸ್ ಹಿರಿಯ ನಾಯಕರು ನೀಡಿದ್ದಾರಂತೆ. ಈಗಾಗಲೇ ಬಂಡಾಯದ ಬಾವುಟ ಹಾರಿಸಿದ್ದ ಕುಂದಾ ನಗರಿಯ ಸಾಹುಕಾರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಗಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿದೆ. ಒಟ್ಟಿನಲ್ಲಿ ಬಂಡಾಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಶಾಸಕರಿಗೆ ಭವಿಷ್ಯದಲ್ಲಿ ಒಳ್ಳೆಯ ಸ್ಥಾನ ಮಾನಗಳು ಸಿಗೋದು ಬಹುತೇಕ ಖಚಿತ ಆಗಿದೆಯಂತೆ.

ಬಿಜೆಪಿ ನಂಬಿಕೊಂಡು ಹೋಗಿ ಕೊನೆಗೂ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅಂತಾದ್ರೆ ನಿಮ್ಮ ಕ್ಷೇತ್ರದ ಅಭಿವೃದ್ಧಿಯ ಕಥೆ ಏನು..? ನಿಮ್ಮದೇ ಸರ್ಕಾರವಿದೆ, ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಿ. ಬಿಜೆಪಿಯಲ್ಲೇ 104 ಮಂದಿ ಶಾಸಕರಿದ್ದು, ಅವರಲ್ಲೇ ಸ್ಥಾನಮಾನಕ್ಕಾಗಿ ಪೈಪೋಟಿಯ ಸ್ಥಿತಿ ಇದೆ. ಪಕ್ಷಕ್ಕೆ ಕೈ ಕೊಟ್ಟು ನೀವು ಬಿಜೆಪಿಗೆ ಹೋದರೆ ನಿಮಗೆ ಸೂಕ್ತ ಸ್ಥಾನಮಾನ ಸಿಗುತ್ತೆ ಅನ್ನೋದಕ್ಕೆ ಗ್ಯಾರಂಟಿ ಏನು..? ಎಂದು ಹೇಳಿ ಕಾಂಗ್ರೆಸ್ ಹಿರಿಯ ನಾಯಕರು ಮುನಿಸಿಕೊಂಡಿದ್ದ ಶಾಸಕರನ್ನು ಕರೆತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಸೋತು ಉಲ್ಟಾ ಹೊಡೆದ ರಮೇಶ್ ಜಾರಕಿಹೊಳಿ ಗೇಮ್ ಆಡಿದ್ರು ಅನ್ನೋದು ವ್ಯಾಪಕ ಚರ್ಚೆಗೀಡಾಗಿದೆ. ಪಕ್ಷದಲ್ಲಿ ನನ್ನ ಪ್ರಭಾವ ಕಡಿಮೆಯಾಗಿದೆ. ನನ್ನ ಕೈ ಮೇಲಾಗ್ಲೇಬೇಕು ಅನ್ನೋದಕ್ಕೆ ರಮೇಶ್ ಗೇಮ್ ಆಡಿದ್ರು. ಆ ಗೇಮ್‍ಗೆ ಮಣಿದ ಕಾಂಗ್ರೆಸ್ ನಾಯಕರು ರಮೇಶ್‍ಗೆ ಬೇಡಿಕೆಗಳಿಗೆ ಮಣಿದಿದ್ದಾರೆ ಎನ್ನಲಾಗ್ತಿದೆ. ರಮೇಶ್ ಶಾಂತವಾದ ಬೆನ್ನಲ್ಲೇ ರೆಬೆಲ್‍ಗಳು ಸಹ ನಮಗೂ ಪಕ್ಷದಿಂದ ಕೆಲವು ಸ್ಥಾನಮಾನ ಸಿಗುತ್ತೆ ಅಂತ ಶಾಂತವಾಗಿದ್ದಾರಂತೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ