ಪಾಕ್ ನ ಶಾಂತಿ ಮಾತುಕತೆ ಆಹ್ವಾನದಲ್ಲಿ ಗಂಭೀರತೆ ಇಲ್ಲ: ಭಾರತ

ನವದೆಹಲಿ: ಶಾಂತಿ ಮಾತುಕತೆಗೆ ಪಾಕಿಸ್ತಾನದ ಆಹ್ವಾನದಲ್ಲಿ ಯಾವುದೇ ಗಂಭೀರತೆಯಿಲ್ಲ. ಉಗ್ರ ಸಂಘಟನೆಗಳಿಗೆ ಇಸ್ಲಾಮಾಬಾದ್‌ನ ಬೆಂಬಲ ಮುಂದುವರಿದಿದೆ ಎಂದು ಭಾರತ ಕಿಡಿಕಾರಿದೆ.

ಶಾಂತಿ ಮಾತುಕತೆಗೆ ಭಾರತ ಪ್ರತಿಕ್ರಿಯಿಸುತ್ತಿಲ್ಲ ಎಂಬ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಆರೋಪಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌
ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನದ ಉಗ್ರರನ್ನು ಮುಖ್ಯವಾಹಿನಿಗೆ ತರುವ ಹುನ್ನಾರ ನಡೆಸಿದ್ದು, ಇಸ್ಲಾಮಾ ಬಾದ್ ನಲ್ಲಿ ಇನ್ನೂ ಉಗ್ರ ಸಂಘಟನೆಗಳಿಗೆ ಬೆಂಬಲ ಮುಂದುವರೆಸಿದೆ ಎಂದಿದ್ದಾರೆ.

ಮಾತುಕತೆಗೆ ಸಿದ್ಧ ಎಂದು ಇಮ್ರಾನ್‌ ಖಾನ್‌ ಹೇಳುತ್ತಾರೆ, ಆದರೆ ಅವರ ಸಚಿವರು ಅಂತಾರಾಷ್ಟ್ರೀಯ ಉಗ್ರರೊಂದಿಗೆ ಏಕೆ ವೇದಿಕೆ ಹಂಚಿಕೊಳ್ಳುತ್ತಾರೆ? ಕಳೆದ ಕೆಲವು ತಿಂಗಳಲ್ಲಿ ಅವರ ಸಚಿವರು ಅಂತಹ ಜನರೊಂದಿಗೆ ವೇದಿಕೆ ಹಂಚಿಕೊಂಡ ಅನೇಕ ನಿದರ್ಶನಗಳಿವೆ ಎಂದು ಹೇಳಿದರು.

ಸೆಪ್ಟೆಂಬರ್‌ 30ರಂದು ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪಾಕ್‌ ಧಾರ್ಮಿಕ ವ್ಯವಹಾರಗಳ ಸಚಿವ ನೂರ್‌ ಉಲ್‌ ಹಕ್‌ ಅವರು ಜಮತ್‌ ಉದ್‌ ದವಾ(ಜೆಯುಡಿ) ಮುಖ್ಯಸ್ಥ ಹಫೀಜ್‌ ಸಯೀದ್‌ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಇಬ್ಬರೂ ಭಾರತ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೇ ಜೆಯುಡಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಕೇಂದ್ರಗಳನ್ನು ತೆರೆಯುತ್ತಿದೆ ಎಂದು ದೂರಿದರು.

ಡಿಸೆಂಬರ್‌ನಲ್ಲಿ ಪಾಕ್‌ ಅಂತರಿಕ ಸಚಿವರು ಜೆಯುಡಿ ಉಗ್ರ ಸಂಘಟನೆಯ ಪ್ರತಿನಿಧಿಗಳನ್ನು ಭೇಟಿಯಾಗಿ ಬಹಿರಂಗವಾಗಿ ಬೆಂಬಲ ಘೋಷಿಸಿದರು. ಪಾಕಿಸ್ತಾನ ಮಾತುಕತೆಗೆ ಸಿದ್ಧವಿದ್ದರೆ, ಮುಂಬಯಿ ಮತ್ತು ಪಠಾಣ್‌ಕೋಟ್‌ ದಾಳಿಯಲ್ಲಿ ಭಾಗಿಯಾದ ಉಗ್ರರ ವಿರುದ್ಧ ಇದುವರೆಗೆ ಕ್ರಮ ಏಕೆ ತೆಗೆದುಕೊಂಡಿಲ್ಲ? ಮಾತುಕತೆ ನಂತರ ಯಾವಾಗಲು ಈ ವಿಷಯ ಬದಿಗೆ ಸರಿಯುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Pakistan not ‘serious’ about talks, trying to mainstream terror: India

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ