ಭಯೋತ್ಪಾದನೆ ಯುದ್ಧದ ಹೊಸ ರೂಪ: ಜನರಲ್ ಬಿಪಿನ್ ರಾವತ್

ನವದೆಹಲಿ, ಜ.9-ಭಯೋತ್ಪಾದನೆ ಯುದ್ಧದ ಹೊಸ ರೂಪವಿದ್ದಂತೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ವ್ಯಾಖ್ಯಾನಿಸಿದ್ದಾರೆ.

ಭಯೋತ್ಪಾದನೆ ಬಹು ತಲೆಯ ಹೆಮ್ಮಾರಿಯಂತೆ ತಲೆ ಎತ್ತುತ್ತಿದ್ದು ಎಲ್ಲಿಯವರೆಗೆ ಇದನ್ನು ಕೆಲವು ದೇಶಗಳು ತನ್ನ ರಾಷ್ಟ್ರೀಯ ನೀತಿಯನ್ನಾಗಿ ಬಳಸುವುದನ್ನು ಮುಂದುವರಿಸುತ್ತದೆಯೋ ಅಲ್ಲಿಯವರೆಗೂ ಈ ಪಿಡುಗೆ ಅಸ್ತಿತ್ವದಲ್ಲಿ ಇರುತ್ತದೆ ಎಂದು ಪಾಕಿಸ್ತಾನವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ದೆಹಲಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥರು, ಭಯೋತ್ಪಾದನೆ ಮತ್ತು ಉಗ್ರವಾದ ಹಬ್ಬುವ ಮೂಲವಾಗಿರುವ ಸಾಮಾಜಿಕ ಮಾಧ್ಯಮವನ್ನು ಈ ನಿಟ್ಟಿನಲ್ಲಿ ನಿಯಂತ್ರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿ ವಿಭಿನ್ನ ರೀತಿಯ ಭಯೋತ್ಪಾದನೆ, ಉಗ್ರವಾದ ಮತ್ತು ತೀವ್ರವಾದಗಳು ಕಂಡು ಬರುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತಪ್ಪು ಮಾಹಿತಿ, ದಾರಿ ತಪ್ಪಿಸುವಿಕೆ ಮತ್ತು ಧರ್ಮದ ಬಗ್ಗೆ ಸುಳ್ಳು ಸೃಷ್ಟಿಗಳಿಂದ ಯುವಕರು ಉಗ್ರವಾದದತ್ತ ಆಕರ್ಷಿತರಾಗುತ್ತಿದ್ದಾರೆ. ಯುವಕರ ತಲೆಗೆ ಇಂಥ ಕೆಟ್ಟ ಸಂಗತಿಗಳನ್ನು ತುಂಬಿ ಅವರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಜನರಲ್ ಬಿಪಿನ್ ರಾವತ್ ಆತಂಕದಿಂದ ಹೇಳಿದರು.

ಈ ಎಲ್ಲ ಕಾರಣಗಳಿಂದಲೇ ಭಯೋತ್ಪಾದನೆಯತ್ತ ಹೆಚ್ಚು ಹೆಚ್ಚು ಸುಶಿಕ್ಷಿತ ಯುವಕರನ್ನು ಎಳೆದು ತರಲಾಗುತ್ತಿದೆ ಎಂದು ಅವರು ವಿಷಾದಿಸಿದರು.
ಕೆಲವು ದೇಶಗಳು ಭಯೋತ್ಪಾದನೆಯನ್ನು ತನ್ನ ನೀತಿಯನ್ನಾಗಿಸಿಕೊಂಡಿವೆ ಎಂದು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದ ಅವರು, ಎಲ್ಲಿಯವರೆಗೆ ಇದನ್ನು ಕೆಲವು ದೇಶಗಳು ತನ್ನ ರಾಷ್ಟ್ರೀಯ ನೀತಿಯನ್ನಾಗಿ ಬಳಸುವುದನ್ನು ಮುಂದುವರಿಸುತ್ತದೆಯೋ ಅಲ್ಲಿಯವರೆಗೂ ಈ ಹೆಮ್ಮಾರಿ ಅಸ್ತಿತ್ವದಲ್ಲಿ ಇರುತ್ತದೆ ಎಂದು ಅವರು ಅರ್ಥೈಸಿದರು.

ಭಯೋತ್ಪಾದನೆ ಎಂಬುದು ಈಗ ಯುದ್ಧದ ಹೊಸ ಸ್ವರೂಪವಾಗಿದೆ. ದುರ್ಬಲ ದೇಶವು ಮತ್ತೊಂದು ದೇಶದ ಮೇಲೆ ಪರೋಕ್ಷ ಯುದ್ಧಕ್ಕಾಗಿ ಭಯೋತ್ಪಾದಕರನ್ನು ಬಳಸುತ್ತಿದೆ ಎಂದು ಅವರು ಪರೋಕ್ಷವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ