ಬೆಂಗಳೂರು, ಜ.9- ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬ ಆಚರಣೆಗೆ ನಿರಾಕರಿಸಿದ್ದರೆಂದು ಬೇಸರಗೊಂಡು, ಹೊಸಕೆರೆಹಳ್ಳಿಯ ರಿಂಗ್ ರಸ್ತೆಯಲ್ಲಿರುವ ಯಶ್ ಮನೆ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಲಗ್ಗೆರೆ ನಿವಾಸಿ ರವಿ (31) ಆತ್ಮಹತ್ಯೆಗೆ ಯತ್ನಿಸಿ ಶೇ.80ರಷ್ಟು ಗಾಯಗೊಂಡಿದ್ದ ಈತನಿಗೆ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೀವನ್ಮರಣ ಹೋರಾಟ ನಡೆಸುತ್ತಿದ್ದ ರವಿ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಘಟನೆ ನಡೆದ ವೇಳೆ ಮನೆಯಲ್ಲಿ ಯಶ್ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪ್ರತಿ ವರ್ಷ ಜ.8 ರಂದು ತನ್ನ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭ ಕೋರಲು ಅವರ ಮನೆಗೆ ಬರುತ್ತಿದ್ದ. ಆದರೆ, ಈ ವರ್ಷ ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಜನ್ಮದಿನ ಆಚರಣೆಗೆ ನಿರಾಕರಿಸಿದ್ದ ಯಶ್, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಸಂದೇಶ ಮೂಲಕ ತಮ್ಮ ಅಭಿಮಾನಿಗಳಲ್ಲಿ ಶುಭ ಕೋರಲು ಮನೆಗೆ ಬರಬೇಡಿ ಎಂದು ವಿನಂತಿಸಿದ್ದರು.
ಆದರೂ ಪ್ರತಿ ವರ್ಷದಂತೆ ರವಿ ಸೇರಿದಂತೆ ನೂರಾರು ಅಭಿಮಾನಿಗಳು, ಯಶ್ ಅವರಿಗೆ ಶುಭಕೋರಲು ಹೊಸಕೆರೆಹಳ್ಳಿಯಲ್ಲಿರುವ ಅವರ ಮನೆ ಮುಂದೆ ಬೆಳಗ್ಗೆಯಿಂದಲೇ ನೆರೆದಿದ್ದರು. ಆದರೆ ತಮ್ಮ ಮಾತಿಗೆ ಬದ್ಧರಾದ ಯಶ್, ಜನ್ಮದಿನ ಆಚರಿಸದೇ ತಮ್ಮ ಕುಟುಂಬದ ಸದಸ್ಯರ ಜತೆ ಹೊರ ಹೋಗಿದ್ದರು.
ಈ ವೇಳೆ ಮಧ್ಯಾಹ್ನದವರೆಗೆ ಯಶ್ಗಾಗಿ ಅವರೆ ಮನೆ ಮುಂದೆ ಕಾದ ರವಿ, ಕೊನೆಗೆ ಬೇಸತ್ತು ಸಂಜೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ.
ತಕ್ಷಣವೇ ಯಶ್ ಮನೆ ಬಳಿ ಭದ್ರತೆಗೆ ನಿಯೋಜಿತರಾಗಿದ್ದಪೊಲೀಸರು, ರವಿ ಅವರ ರಕ್ಷಣೆಗೆ ಧಾವಿಸಿದ್ದರು. ನೀರು ಸುರಿದು ಬೆಂಕಿ ನಂದಿಸಿದ ಪೊಲೀಸರು, ಕೂಡಲೇ ಅಂಬ್ಯುಲೆನ್ಸ್ನಲ್ಲಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಅದರೀಗ ಚಿಕಿತ್ಸೆ ಫಲಕರಿಯಾಗದೆ ರವಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.