ಬಂದ್ ಬೆಂಬಲಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್

ಬೆಂಗಳೂರು, ಜ.8- ಬೆಲೆ ಏರಿಕೆ, ಕಾರ್ಮಿಕ ಕಾನೂನುಗಳಿಗೆ ಬಂಡವಾಳಗಾರರ ಪರ ತಿದ್ದುಪಡಿ ಮಾಡಿರುವುದು ಸೇರಿದಂತೆ ಹಲವು ಕೇಂದ್ರ ಸರ್ಕಾರಗಳ ನೀತಿ ಖಂಡಿಸಿ ಎಡ ಪಕ್ಷಗಳು ಕರೆ ಕೊಟ್ಟಿರುವ ಎರಡು ದಿನಗಳ ಮುಷ್ಕರವನ್ನು ಬೆಂಬಲಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಿನೂತನ ಪ್ರತಿಭಟನೆ ಮಾಡಲಾಯಿತು.

ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಗಿರೀಶ್‍ಗೌಡ ಸೇರಿದಂತೆ ಸಂಘಟನೆಗಳ ಹಲವು ಮುಖಂಡರು ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು.

ಬೆಲೆ ಏರಿಕೆ ಆಗಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ.ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಿ ರೈತರ ಸಂಕಷ್ಟಕ್ಕೆ ಪರಿಹಾರ ಸೂಚಿಸಬೇಕು.18 ಸಾವಿರ ಸಮಾನ ಕನಿಷ್ಟ ವೇತನ ಜಾರಿಗೊಳಿಸಿ ಕಾರ್ಮಿಕರ ರಕ್ಷಣೆಗೆ ಸರ್ಕಾರಗಳು ಮುಂದಾಗಬೇಕು ಎಂದು ಪ್ರತಿಭಟನಾನಿರತ ಮುಖಂಡರು ಆಗ್ರಹಿಸಿದರು.

ಮುಷ್ಕರದಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದ್ದರೂ ಕೂಡ ಜನವಿರೋಧಿ ಸರ್ಕಾರಗಳ ಕಣ್ತೆರೆಸಲು ಮುಷ್ಕರ ಅನಿವಾರ್ಯವಾಗಿದೆ. ಹಾಗಾಗಿ ಮುಷ್ಕರಕ್ಕೆ ಬೆಂಬಲಿಸಿ ನಾವು ಪಾಲ್ಗೊಂಡಿದ್ದೇವೆ. ಕನ್ನಡ ಒಕ್ಕೂಟ ಯಾವಾಗಲೂ ಜನಪರವಾಗಿ, ಕಾರ್ಮಿಕರ ಪರವಾಗಿರುತ್ತದೆ ಎಂದು ವಾಟಾಳ್ ಹೇಳಿದರು.

ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸುವ ಮೂಲಕ ಕಾರ್ಮಿಕರಿಗೆ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ