ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ಅಭ್ಯರ್ಥಿಯಾಗಿ ಹಿರಿಯ ಮುಖಂಡ ಸಲೀಂ ಅಹಮದ್?

ಬೆಂಗಳೂರು, ಜ.8- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ, ಎಐಸಿಸಿ ಕಾರ್ಯದರ್ಶಿ ಸಲೀಂ ಅಹಮ್ಮದ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

1991ರಲ್ಲಿ ಸಲೀಂ ಅಹಮ್ಮದ್ ಅವರಿಗೆ ಲೋಕಸಭೆ ಟಿಕೆಟ್ ನೀಡಬೇಕೆಂದು ಅಂದಿನ ಶಾಸಕ ಮತ್ತು ಮಾಜಿ ಮೇಯರ್ ಎ.ಕೆ.ಅನಂತಕೃಷ್ಣ ಅವರು ಜಾಫರ್ ಶರೀಫ್ ಬದಲಿಗೆ ಅಂದಿನ ಎನ್‍ಎಸ್‍ಯುಐ ರಾಷ್ಟ್ರೀಯ ಅಧ್ಯಕ್ಷ ಸಲೀಂ ಅಹಮ್ಮದ್ ಅವರಿಗೆ ನೀಡಬೇಕೆಂದು ಒತ್ತಾಯಿಸಿದ್ದರು.

ವಿದ್ಯಾರ್ಥಿ ನಾಯಕರಾಗಿ ನಗರದಲ್ಲಿ ರಾಜಕೀಯ ಜೀವನ ಪ್ರಾರಂಭಿಸಿ ಪಕ್ಷದ ವಿವಿಧ ಹಂತಗಳ ಜವಾಬ್ದಾರಿ ನಿರ್ವಹಿಸಿರುವ ಸಲೀಂ ಅಹಮ್ಮದ್ ಅವರು ಅಖಿಲ ಭಾರತ ಎನ್‍ಎಸ್‍ಯುಐ ಅಧ್ಯಕ್ಷರಾಗಿ, ಇಂಡಿಯನ್ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಕೇಂದ್ರ ಸರ್ಕಾರದ ನೆಹರು ಯುವಕೇಂದ್ರ ಸಂಘಟನೆಯ ಮಹಾನಿರ್ದೇಶಕರಾಗಿ ಹಾಗೂ ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಅಖಿಲ ಭಾರತ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಲೀಂ ಅಹಮ್ಮದ್ ಅವರಿಗೆ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಟಿಕೆಟ್ ನೀಡಲು ಹಿರಿಯ ಕಾಂಗ್ರೆಸ್ ಮುಖಂಡರು, ಯುವ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರು ಒಲವು ತೋರುತ್ತಿದ್ದಾರೆ.

ಜಾತ್ಯತೀತ ವ್ಯಕ್ತಿಯಾಗಿರುವ ಸಲೀಂ ಅಹಮ್ಮದ್ ಅವರಿಗೆ ಎಲ್ಲ ಸಮಾಜದವರೂ ಒಲವು ತೋರುತ್ತಿದ್ದಾರೆ. ಪ್ರಸ್ತುತ ಸಲೀಂ ಅಹಮ್ಮದ್ ಅವರು ಗೆಲ್ಲುವ ಅಭ್ಯರ್ಥಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ