ಬೆಂಗಳೂರು, ಜ.7-ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಮಾಧ್ಯಮ ವಿಷಯವಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿಲುವಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ತಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಒಂದು ಸಾವಿರ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಇಂಗ್ಲಿಷ್ ಭಾಷಾ ಮಾಧ್ಯಮಗಳನ್ನು ಬೋಧಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿರ್ಧರಿಸಿದ್ದು, ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಈಗ ಅದು ವಿವಾದಕ್ಕೆ ಗುರಿಯಾಗಿದ್ದು, ಸಾಹಿತ್ಯ ಸಮ್ಮೇಳನದಲ್ಲೂ ಇಂಗ್ಲಿಷ್ ಭಾಷಾಮಾಧ್ಯಮಕ್ಕೆ ವಿರೋಧ ವ್ಯಕ್ತವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಕಲಿತವರೆಲ್ಲ ದಡ್ಡರಲ್ಲ. ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಮುಖ್ಯವಾಗಬೇಕು.ಇಂಗ್ಲಿಷ್ ಮಾಧ್ಯಮ ಅಗತ್ಯ ಇಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು.ತಾವು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿಲುವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದ ನಿರ್ಧಾರಕ್ಕೆ ನನ್ನ ಸಹಮತವಿದೆ.ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾದರೆ ಇಂಗ್ಲಿಷ್ ಅನಿವಾರ್ಯವಾಗಿದೆ. ಹೀಗಾಗಿ ಇಂಗ್ಲಿಷ್ ಕಲಿಕೆಗೆ ನನ್ನ ಬೆಂಬಲವಿದೆ.ನಾವು ಇಂಗ್ಲಿಷ್ ಕಲಿಸಿದಾಕ್ಷಣ ಕನ್ನಡವನ್ನು ತೆಗೆದು ಹಾಕುತ್ತೇವೆ ಎಂದರ್ಥವಲ್ಲ. ಇಂಗ್ಲಿಷ್ ಜತೆಗೆ ಕನ್ನಡವನ್ನೂ ಹೆಚ್ಚುವರಿಯಾಗಿ ಕಲಿಸುತ್ತೇವೆ. ರಾಷ್ಟ್ರ ಮಟ್ಟದಲ್ಲಿ ತ್ರಿಭಾಷಾ ಸೂತ್ರವಿದ್ದು, ಇಂಗ್ಲಿಷ್, ಹಿಂದಿ, ಕನ್ನಡ ಮೂರು ಭಾಷೆಗಳಿಗೂ ಆದ್ಯತೆ ಇದೆ.ಸ್ಥಳೀಯ ಭಾಷೆ ನಮ್ಮ ಕನ್ನಡಕ್ಕೂ ಆದ್ಯತೆ ಇದ್ದು, ಇಂಗ್ಲಿಷ್ ಭಾಷೆ ಕಲಿಸುವುದು ಅನಿವಾರ್ಯ ಎಂದು ಹೇಳಿದರು.
ಈ ಮೂಲಕ ಭಾಷಾ ಮಾಧ್ಯಮದ ವಿಷಯವಾಗಿ ಕಾಂಗ್ರೆಸ್ ನಾಯಕರಲ್ಲೇ ಗೊಂದಲದ ಪರಿಸ್ಥಿತಿ ಏರ್ಪಟ್ಟಿದೆ. ಇನ್ನು ಪಕ್ಷದಲ್ಲಿ ವಿರೋಧವಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಸಮ್ಮಿಶ್ರ ಸರ್ಕಾರ ಕನ್ನಡವನ್ನು ನಿರ್ಲಕ್ಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಕನ್ನಡ ಭಾಷಾ ಮಾಧ್ಯಮದ ಜಾರಿಗಾಗಿ ತೀವ್ರ ಹೋರಾಟ ನಡೆಸಿತ್ತು. ಖಾಸಗಿ ಹಾಗೂ ಸರ್ಕಾರಿ ಶಾಲೆ ಸೇರಿದಂತೆ ಎಲ್ಲಾ ಶಾಲೆಗಳಲ್ಲೂ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆಯುಂಟಾಗಿತ್ತು.ಸಿಎನ್ಆರ್ ರಾವ್ ಸೇರಿದಂತೆ ಹಲವಾರು ವಿಜ್ಞಾನಿಗಳು ಕನ್ನಡ ಶಾಲೆಯಲ್ಲಿ ಕಲಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಹೀಗಿರುವಾಗ ಮಾತೃ ಭಾಷೆಯನ್ನು ನಿರ್ಲಕ್ಷ್ಯ ಮಾಡುವುದು ಬೇಡ ಎಂಬುದು ಸಿದ್ದರಾಮಯ್ಯ ಅವರ ನಿಲುವು.ಆದರೆ, ಪೆÇೀಷಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕುಮಾರಸ್ವಾಮಿ ಅವರು ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಜಾರಿಗೆ ತರಲು ಮುಂದಾಗಿದ್ದಾರೆ.
ಇದು ಸಿದ್ದರಾಮಯ್ಯ ಸರ್ಕಾರದ ನಿಲುವುಗಿಂತ ತದ್ವಿರುದ್ದವಾಗಿದ್ದು, ಸಂಘರ್ಷಕ್ಕೆ ಕಾರಣವಾಗಿದೆ.
ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಇಂಗ್ಲಿಷ್ ಭಾಷಾ ಮಾಧ್ಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮೈತ್ರಿ ಸರ್ಕಾರದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇನ್ನಷ್ಟು ಗೊಂದಲಗಳಿಗೆ ಅವಕಾಶ ಮಾಡಿಕೊಟ್ಟಿತ್ತು.
ಈಗ ಪರಮೇಶ್ವರ್ ಅವರು ಕುಮಾರಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.