ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ವಿಜ್ಞಾನ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ ಡಿಸಿಎಂ

ಬೆಂಗಳೂರು, ಜ.7- ರಾಜ್ಯದ ಜಿಲ್ಲಾ ಕೇಂದ್ರಗಳಲ್ಲೂ ವಿಜ್ಞಾನ ಕೇಂದ್ರಗಳನ್ನುಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದ ಸೆಂಟ್‍ಜೋಸೆಫ್ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ಮ್ಯೂಜಿಯಂ ಸಹಯೋಗದಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ರಾಜ್ಯಗಳ ವಿಜ್ಞಾನ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನಕ್ಕೆ ಹೆಚ್ಚಿನ ಪೆÇ್ರೀ ನೀಡುವ ಸಲುವಾಗಿ ರಾಜ್ಯ ಸರ್ಕಾರ ಅಗತ್ಯವಾದ ಎಲ್ಲಾ ಕಾರ್ಯಕ್ರಮ ಕೈಗೊಂಡಿದೆ.ಪ್ರತಿ ಜಿಲ್ಲೆಯಲ್ಲೂ ಒಂದೊಂದು ವಿಜ್ಞಾನ ಕೇಂದ್ರ ಸ್ಥಾಪಿಸಬೇಕೆಂಬು ಸರ್ಕಾರದ ಉದ್ದೇಶ.

ಗಾಗಲೇ ವಿಭಾಗೀಯ ಮಟ್ಟದಲ್ಲಿ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಆರಂಭಗೊಂಡಿದೆ. ನನಗೆ 10 ದಿನಗಳ ಹಿಂದಷ್ಟೇ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಿಕ್ಕಿದ್ದು, ಇಲಾಖೆ ವತಿಯಿಂದ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ತೋರಿಸುವವರ ಸಂಖ್ಯೆ ಹೆಚ್ಚಿದೆ.ಮೈಸೂರು ಮಹಾರಾಜರ ಕಾಲದಲ್ಲೇ ಕರ್ನಾಟಕದ ವಿಜ್ಞಾನ-ತಂತ್ರಜ್ಞಾನದ ಬಗ್ಗೆ ಆಸಕ್ತಿ ತೋರಿಸಲಾಗಿತ್ತು. ಆ ಸಂದರ್ಭದಲ್ಲಿ ಟಾಟಾ ಸಂಸ್ಥೆಗೆ ಮಹಾರಾಜರು 500 ಎಕರೆ ಭೂಮಿ ಕೊಟ್ಟಿದ್ದರು. ಮುಂದಿನ ದಿನಗಳಲ್ಲಿ ಅದೇ ಜಾಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಆರಂಭವಾಯಿತು.ಬೆಂಗಳೂರಿನಲ್ಲಿ ತಾಂತ್ರಿಕವಾಗಿ ಸಮೃದ್ಧಿಯಾದ ಮಾನವ ಸಂಪನ್ಮೂಲ ಇದೆ ಎಂಬ ಕಾರಣಕ್ಕಾಗಿ ಎಚ್‍ಎಎಲ್, ಬಿಇಎಲ್, ಐಟಿಐ ನಂತಹ ಪ್ರತಿಷ್ಠಿತ ಕಂಪೆನಿಗಳು ಇಲ್ಲಿ ಆರಂಭಗೊಂಡವು ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ವಿಜ್ಞಾನಿಗಳಾದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಸಿ.ಎನ್.ಆರ್.ರಾವ್ ನಮ್ಮ ನೆಲದವರು.ಅಬ್ದುಲ್ ಕಲಾಂ ಅವರು ಕೂಡ ಇಲ್ಲಿಯೇ ಕೆಲಸ ಮಾಡಿದ್ದರಿಂದ ಅವರನ್ನೂ ಕರ್ನಾಟಕದವರೆಂದೇ ಪರಿಗಣಿಸಬೇಕು.ಸಿ.ಎನ್.ಆರ್.ರಾವ್ ಅವರಿಗೆ ವಿಶ್ವದ ಬೇರೆ ಬೇರೆ ವಿಶ್ವವಿದ್ಯಾಲಯಗಳು 38 ಗೌರವ ಡಾಕ್ಟರೇಟ್ ನೀಡಿವೆ. ಅಂತಹ ಮಹಾನ್ ವ್ಯಕ್ತಿಗಳು ನಮ್ಮಲ್ಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಇಂಜನಿಯರಿಂಗ್, ಮೆಡಿಕಲ್ ಕಾಲೇಜುಗಳು ಹೆಚ್ಚಿವೆ. ನಾಸಾದಲ್ಲಿ ಕರ್ನಾಟಕದ ವಿಜ್ಞಾನಿಗಳು ಹೆಚ್ಚಿದ್ದಾರೆ. ವಿಜ್ಞಾನದ ಅಭಿವೃದ್ಧಿ ಅಂಬೇಡ್ಕರ್ ಅವರ ದೂರದೃಷ್ಟಿ ಫಲ. 1950ರಲ್ಲಿ ಸಂವಿಧಾನವನ್ನು ಭಾರತಕ್ಕೆ ಸಮರ್ಪಿಸಿದಾಗ ಅಂಬೇಡ್ಕರ್ ಅವರು ಆರ್ಟಿಕಲ್ 61ಎ ಅನ್ನು ಸೇರಿಸಿ ಮೂಲಭೂತ ಹಕ್ಕುಗಳಲ್ಲಿ ವಿಜ್ಞಾನದ ಆವಿಷ್ಕಾರವನ್ನು ಮೂಲಮೂತ ಹಕ್ಕು ಎಂದು ಪರಿಗಣಿಸಿದ್ದಾರೆ. ಹೀಗಾಗಿ ದಿನೇ ದಿನೇ ವಿಜ್ಞಾನ ಬೆಳವಣಿಗೆಯಾಗುತ್ತಿದೆ. ವಿದ್ಯಾರ್ಥಿಗಳ ಪಠ್ಯ ಕ್ರಮದಲ್ಲಿ ವಿಜ್ಞಾನ ಸೇರ್ಪಡೆಯಾಗಿದೆ ಎಂದರು.

ಸರ್.ಎಂ.ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ಮ್ಯೂಜಿಯಂನ ನಿರ್ದೇಶಕರಾದ ಕೆ.ಮದನ್‍ಗೋಪಾಲ್ ಮಾತನಾಡಿ, ಇದು 38ನೇ ವಿಜ್ಞಾನ ಮೇಳವಾಗಿದೆ.ಇಲ್ಲಿ ಆಂಧ್ರಪ್ರದೇಶದಿಂದ 48, ತಮಿಳುನಾಡಿನಿಂದ 43, ಕರ್ನಾಟಕದಿಂದ 39, ಪುದುಚೇರಿಯಿಂದ 46, ತೆಲಂಗಾಣದಿಂದ 49 ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ.6 ರಾಜ್ಯಗಳಿಂದ ಒಟ್ಟು 261 ವಿಜ್ಞಾನ ವಸ್ತು ಪ್ರದರ್ಶನ ಮಳಿಗೆಗಳು ಇಲ್ಲಿ ತೆರೆದಿವೆ. ಎಲ್ಲಾ ರಾಜ್ಯದ ತೀರ್ಪುಗಾರರು ಇಲ್ಲಿಗೆ ಬಂದಿದ್ದಾರೆ.ಈಗಾಗಲೇ ಜಿಲ್ಲಾ, ವಿಭಾಗೀಯ ಮತ್ತು ರಾಜ್ಯ ಮಟ್ಟದಲ್ಲಿ ಸ್ಪರ್ಧೆಗಳು ನಡೆದಿದ್ದು, ಇಲ್ಲಿ ಆಯ್ಕೆಯಾದವರನ್ನು ರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಲಾಗುವುದು.ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾದವರನ್ನು ಅಮೆರಿಕಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮೇಳಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಸಿಲಿಕಾನ್‍ನನ್ನು ಈ ಮೊದಲು ಯುದ್ಧೋಪಕರಣಗಳಲ್ಲಿ ಬಳಸಲಾಗುತ್ತಿತ್ತು.ಈಗ ಅದನ್ನು ಮೊಬೈಲ್‍ನಲ್ಲಿ ಬಳಕೆ ಮಾಡಲಾಗುತ್ತಿದೆ.ಇಂತಹ ಹಲವಾರು ಆವಿಷ್ಕಾರಗಳು ವಿಜ್ಞಾನದಲ್ಲಿ ನಡೆದಿವೆ ಎಂದು ಹೇಳಿದರು.
ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್ ಸೇರಿದಂತೆ ಹಲವು ಗಣ್ಯರು ಮೇಳದಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ