ಬೆಂಗಳೂರು, ಜ.6-ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ದುಡಿಯುವ ಧೀಮಂತರನ್ನು ಸಮಾಜ ಸದಾ ಸ್ಮರಿಸಿಕೊಳ್ಳುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ತಿಳಿಸಿದರು.
ವಿಜಯನಗರ ಭಂಟರ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಮಧುಕರ್ಶೆಟ್ಟಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಜೀವಿತಾವಧಿಯಲ್ಲಿ ಹಣ, ಆಸ್ತಿ ಮಾಡಿದರೆ, ಮರಣಾನಂತರ ವಾರಸುದಾರರು ಅದನ್ನು ಪಾಲು ಮಾಡಿಕೊಳ್ಳಲು ಜಗಳವಾಡುತ್ತಾರೆ. ಆದರೆ ಸಮಾಜಕ್ಕಾಗಿ ದುಡಿದವರನ್ನು ಸಮಾಜ ಸದಾ ಸ್ಮರಿಸಿಕೊಳ್ಳುತ್ತದೆ ಎಂಬುದಕ್ಕೆ ಮಧುಕರ್ಶೆಟ್ಟಿ ಅವರೇ ನಿದರ್ಶನ ಎಂದು ಹೇಳಿದರು.
ನನ್ನ ಮಗಳ ಮದುವೆಗೆ ಪೆÇಲೀಸ್ ಭದ್ರತೆ ಒದಗಿಸುವಂತೆ ಡಿಸಿಪಿಯಾಗಿದ್ದ ಡಾ.ಮಧುಕರ್ ಶೆಟ್ಟಿ ಅವರನ್ನು ಮನವಿ ಮಾಡಿದಾಗ ಇಲಾಖೆ ಪತ್ರ ಹಾಗೂ ಹಣ ತುಂಬುವಂತೆ ತಿಳಿಸಿ ಪ್ರಾಮಾಣಿಕತೆ ಮೆರೆದಿದ್ದರು ಎಂದು ಸ್ಮರಿಸಿದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಮಾತನಾಡಿ, ಪ್ರಾಮಾಣಿಕರಿಗೆ ಸಣ್ಣ ವಯಸ್ಸಿನಲ್ಲೇ ಮರಣ ದಯಪಾಲಿಸುವುದು ಸೃಷ್ಟಿಕರ್ತನ ತಪ್ಪು. ಮಧುಕರ್ಶೆಟ್ಟಿಯವರಂತಹ ಪ್ರಾಮಾಣಿಕ ಅಧಿಕಾರಿ ಸಾವು ದುರದೃಷ್ಟಕರ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜಕ್ಕೆ ಅತ್ಯಮೂಲ್ಯ ಸೇವೆ ಸಲ್ಲಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ಆಯಕಟ್ಟಿನಹುದ್ದೆಯಲ್ಲಿ ಹಾಗೂ ಸ್ಥಳದಲ್ಲಿ ತಮ್ಮ ಕರ್ತವ್ಯದ ಅವಧಿಯನ್ನು ಪೂರ್ಣಗೊಳಿಸಲು ವ್ಯವಸ್ಥೆ ಬಿಡುವುದಿಲ್ಲ ಎಂಬುದು ಮಧುಕರ್ಶೆಟ್ಟಿ ಪ್ರಕರಣದಲ್ಲಿ ಸಾಬೀತಾಗಿದೆ ಎಂದರು.
ಭಂಟರ ಸಂಘದ ಅಧ್ಯಕ್ಷ ಉಪೇಂದ್ರಶೆಟ್ಟಿ, ಕಾರ್ಯಾಧ್ಯಕ್ಷ ಮಧುಕರಶೆಟ್ಟಿ, ಎಸಿಪಿ ಗಿರೀಶ್, ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಮತ್ತಿತರರಿದ್ದರು.