ಗಾಂಧೀಜಿಯವರ 150ನೇ ವರ್ಷಾಚರಣೆಯ ಸ್ಮರೋತ್ಸವವಾಗಿಯೂ ಹೊರಹೊಮ್ಮಿದ 16ನೇ ಚಿತ್ರಸಂತೆ

ಬೆಂಗಳೂರು, ಜ.6-ಹಲವು ವೈಶಿಷ್ಟ್ಯಗಳ ಹೂರಣದೊಂದಿಗೆ ಪ್ರತಿವರ್ಷ ನಗರದ ಚಿತ್ರಕಲಾ ಪರಿಷತ್ ಆವರಣ ಮತ್ತು ಕುಮಾರಕೃಪಾ ರಸ್ತೆಯಲ್ಲಿ  ಮೇಳೈಸುವ  ಕಲಾ ಬದುಕಿನ  ಅನಾವರಣಕ್ಕೆ  ಈ ಬಾರಿ ವಸ್ತುವಾಗಿರುವುದು ಗಾಂಧೀಜಿಯವರ ನೆನಪುಗಳು.

ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸುವ 16ನೇ  ಚಿತ್ರ ಸಂತೆ ಈ ಬಾರಿ ಗಾಂಧೀಜಿಯವರ 150ನೇ ವರ್ಷಾಚರಣೆಯ ಸ್ಮರಣೋತ್ಸವವಾಗಿಯೂ ಹೊರಹೊಮ್ಮಿದೆ.
ಚಿತ್ರಸಂತೆಯಲ್ಲಿ ಹೊರರಾಜ್ಯಗಳ ಚಿತ್ರಕಾರರು ಸೇರಿದಂತೆ ಬಣ್ಣದ ಬದುಕಿನ  ಸೆಳೆತದಲ್ಲಿ ತಮ್ಮ ಕುಂಚದ ಮೂಲಕ ಒಡಮೂಡಿಸಿದ ಚಿತ್ರಗಳ ಪ್ರಪಂಚವನ್ನೆಲ್ಲ  ಒತ್ತೊಟ್ಟಿಗಿರಿಸಿದಂತೆ ಭಾಸವಾಗುವ ಕಲಾಪ್ರಪಂಚವನ್ನೇ ಕಾಣಬಹುದಾಗಿದೆ.

ಈ ಬಾರಿ ಇದರೊಂದಿಗೆ ಗಾಂಧೀಜಿಯವರ ವಿಶಿಷ್ಟ ಕಲಾಕೃತಿಗಳು ಇರುವುದು  ಎಲ್ಲರ ಗಮನ ಸೆಳೆಯುತ್ತಿದೆ. ಮೋದಿ, ಗಾಂಧೀಜಿಯವರು ಮುಖಾಮುಖಿಯಾಗಿರುವ ಚಿತ್ರ, ಹಿಟ್ಲರ್-ಗಾಂಧೀಜಿ ನಡುವಿನ ವಾಟ್ಸಾಪ್ ಚಾಟಿಂಗ್ ಚಿತ್ರದಂತಹ ಅಪರೂಪದ ಚಿತ್ರಗಳು ಗಾಂಧೀಜಿ ನೆನಪಿನ ಚಿತ್ರ ಸಂತೆಯಲ್ಲಿ ಎಲ್ಲರ ಚಿತ್ತ ಹರಿಯುವಂತೆ ಮಾಡಿದೆ.

ಇದರೊಂದಿಗೆ ಬಿದಿರಿನಲ್ಲಿ ನಿರ್ಮಿಸಿರುವ ಗಾಂಧಿ ಕುಟೀರದಲ್ಲಿ ಅವರ ಅಪರೂಪದ ಚಿತ್ರಗಳು ಪ್ರದರ್ಶನಗೊಂಡಿವೆ. ಸ್ವಾತಂತ್ರ್ಯ ಹೋರಾಟದಲ್ಲಿ  ಸಕ್ರಿಯರಾಗಿದ್ದ ಸಂದರ್ಭ ಸೇರಿದಂತೆ ಇನ್ನಿತರ ಹಲವು ಗಾಂಧೀಜಿಯ ಚಿತ್ರಗಳು ಅಲ್ಲಿ ಕಾಣಬಹುದಾಗಿದೆ.

ಚರಕದಿಂದ ನೂಲು ತೆಗೆಯುವ ಪ್ರಾತ್ಯಕ್ಷಿಕೆಯನ್ನೂ ಏರ್ಪಡಿಸಲಾಗಿದ್ದು, ಗಾಂಧೀಜಿ ಅನುಯಾಯಿಯೊಬ್ಬರು ನೂಲು ತೆಗೆಯುವ ಪ್ರಾತ್ಯಕ್ಷಿಕೆಯನ್ನು ನೀಡುತ್ತಿದ್ದಾರೆ.  ಹತ್ತಿಯಿಂದ  ನೂಲು ತೆಗೆಯುವ ಪ್ರಕ್ರಿಯೆಯನ್ನು ಕಣ್ಣಾರೆ ನೋಡುವ ಅವಕಾಶವೂ ಒದಗಿದೆ.

ಗಾಂಧೀಜಿಯವರು ಬೆಂಗಳೂರಿಗೆ ಆಗಮಿಸಿದಾಗಲೆಲ್ಲ ಕುಮಾರಕೃಪಾದಲ್ಲಿ ಉಳಿದುಕೊಳ್ಳುತ್ತಿದ್ದರು. ಬೆಳಗಿನ ವಾಯುವಿಹಾರ ಮುಗಿಸಿ ಬಂದು ಚಿತ್ರಕಲಾ ಪರಿಷತ್‍ನ ಆವರಣದಲ್ಲಿರುವ ಬಂಡೆಯ ಮೇಲೆ ಕುಳಿತು ಧ್ಯಾನಸ್ಥರಾಗುತ್ತಿದ್ದರು. ಅದರ ಸ್ಮರಣಾರ್ಥವಾಗಿ ಆ ಬಂಡೆ ಮೇಲೆಯೇ ಬಿದಿರಿನಲ್ಲಿ ಕುಟೀರ ನಿರ್ಮಿಸಲಾಗಿದೆ.  ದೃಶ್ಯ ಕಲೆಯ ಮೂಲಕ ಅವರಿಗೆ ಗೌರವ ಸಮರ್ಪಿಸಲಾಗಿದೆ.  ಚಿತ್ರಕಲಾ ಪರಿಷತ್‍ನ  4 ಗ್ಯಾಲರಿಗಳಲ್ಲಿ ಆಹ್ವಾನಿತರು ಹಾಗೂ ಕಲಾವಿದರಿಂದ ರಚಿತವಾಗಿರುವ ಗಾಂಧಿ ಕುರಿತಾದ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.
ಗಾಂಧೀಜಿಯವರ ತತ್ವಗಳನ್ನು ದೃಶ್ಯ ಕಲೆಯ ಮೂಲಕ ಪ್ರಚುರ ಪಡಿಸಲಾಗಿದೆ.

ಇನ್ನು ಪ್ರತಿವರ್ಷದಂತೆ ಈ ವರ್ಷವೂ ವಿಂಡ್ಸರ್ ಮ್ಯಾನರ್ ಸರ್ಕಲ್‍ನಿಂದ, ಶಿವಾನಂದ ಸರ್ಕಲ್, ಕ್ರೆಸೆಂಟ್ ರಸ್ತೆ ತುಂಬೆಲ್ಲ ಚಿತ್ರಗಳ ಚಿತ್ತಾರ ಎಲ್ಲರನ್ನು ಕೈ ಬೀಸಿ ಕರೆಯುತ್ತಿದ್ದರೆ ಬಣ್ಣಗಳ ಚಿತ್ರಪಟಗಳು ಹಾದಿಯುದ್ದಕ್ಕೂ ತುಂಬಿ ತುಳುಕುತ್ತಿದೆ. 10 ರೂ. ನಿಂದ 5 ಲಕ್ಷ ರೂ.ಗಳವರೆಗಿನ ಚಿತ್ರಗಳು ಮಾರಾಟಕ್ಕೆ ಸಿಗುವುದು ಇಲ್ಲಿನ ವೈಶಿಷ್ಟ್ಯಗಳಲ್ಲಿ ಒಂದು.

ಸ್ಥಳೀಯರು, ನೆರೆ ರಾಜ್ಯದವರು ಸೇರಿದಂತೆ ವಿದೇಶಿಗರೇ ಹೆಚ್ಚಿನ ಸಂಖ್ಯೆಯಲ್ಲಿ  ಚಿತ್ರಸಂತೆಯ ವೀಕ್ಷಕರಾಗಿದ್ದಾರೆ. ಹಾಗಾಗಿ ಖರೀದಿ ಭರಾಟೆಯೂ ಜೋರಾಗಿಯೇ ಇದೆ.
ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಈ ಬಾರಿಯ ಚಿತ್ರಸಂತೆಯಲ್ಲಿ  ಪಾಲ್ಗೊಳ್ಳುವ ನಿರೀಕ್ಷೆಯಂತೆ ಬೆಳಗಿನಿಂದಲೇ ಚುಮುಚುಮು ಚಳಿ ಲೆಕ್ಕಿಸದೆ  ಜನ ಚಿತ್ರಸಂತೆ ದಾಂಗುಡಿ ಇಟ್ಟಿದ್ದು, ಬಿಸಿಲೇರುತ್ತಿದ್ದಂತೆ ಜನಜಾತ್ರೆಯೂ ಹೆಚ್ಚಿತ್ತು.

ಜನವರಿ ಮೊದಲ ಭಾನುವಾರದಂದು ಏರ್ಪಡಿಸುವ ಚಿತ್ರಸಂತೆ ಈ ಬಾರಿಯೂ  ಯಶಸ್ವಿಯಾಯಿತು. ಎಲ್ಲೆಡೆ ಪರಿಸರ ಸ್ನೇಹಿ ವಾತಾವರಣ ಕಲ್ಪಿಸಲಾಗಿದ್ದು, ಕಲಾವಿದರು ಹಾಗೂ ವೀಕ್ಷಕರಿಗಾಗಿ ಇ-ಟಾಯ್ಲೆಟ್ ಸೌಲಭ್ಯ, ಅನೈರ್ಮಲ್ಯ ಎದುರಾಗದಂತೆ ಕಸದ ಬುಟ್ಟಿಗಳ ವ್ಯವಸ್ಥೆ, ಕಲಾವಿದರು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಆಗಾಗ ಸುರಕ್ಷತಾ ಕ್ರಮಗಳನ್ನು ನೀಡಲಾಗುತ್ತಿತ್ತು.

ಕಳೆದ ವರ್ಷ 2 ಕೋಟಿಗೂ ಅಧಿಕ ಮೊತ್ತದ ಕಲಾಕೃತಿಗಳು ಮಾರಾಟವಾಗಿದ್ದು, ಈ ಬಾರಿಯೂ ಮಾರಾಟದ ಭರಾಟೆ ತಗ್ಗಿಲ್ಲ. ಚಿತ್ರಸಂತೆಗೆ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗಿದ್ದು, ಈ ಪ್ರದೇಶ ವ್ಯಾಪ್ತಿಯಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಭಾರತ ಸೇವಾ ದಳ ಮತ್ತು ಕ್ರೆಸೆಂಟ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಚಿತ್ರಸಂತೆ ನಡೆಯುವ ಸ್ಥಳಗಳಲ್ಲಿ ಎಸ್‍ಬಿಐನ 2 ಎಟಿಎಂ, ಹೊರಗೆ ಕೆನರಾ ಬ್ಯಾಂಕ್ ಸಂಚಾರಿ ಎಟಿಎಂ ವ್ಯವಸ್ಥೆ ಕಲ್ಪಿಸಲಾಗಿದ್ದು, ಚಿತ್ರಕಲಾ ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದರ ಯಶಸ್ಸಿಗೆ ಶ್ರಮಿಸಿದ್ದಾರೆ.

ಹಿರಿಯ ಕಲಾವಿದರು, ವಿಶೇಷ ಅವಲಂಬಿತರು, ವಿಕಲಚೇತನ ಕಲಾವಿದರಿಗೆ ಸಂತೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಜೊತೆಗೆ ಪರಿಷತ್‍ನ ಆವರಣದಲ್ಲಿ ಮಳಿಗೆ ನಿರ್ಮಿಸಲು ಅನುವು ಮಾಡಿಕೊಡಲಾಗಿದೆ.

ಜಲವರ್ಣ, ತೈಲವರ್ಣ, ಕ್ಯಾನ್ವಾಸ್, ಶಿಲ್ಪ,ಎಂಬೋಸಿಂಗ್‍ನಂತಹ ಹಲವಾರು ಬಗೆಯ ಚಿತ್ರಕಲಾ ವೈವಿಧ್ಯಗಳು ಸಂತೆಯ ಪ್ರಮುಖ ಆಕರ್ಷಣೆಗಳಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ