ಲೋಕಸಭಾ ಚುನಾವಣೆ: ಕಡುವೈರಿಗಳಾಗಿದ್ದ ಬಿಎಸ್‍ಪಿ ಮತ್ತು ಎಸ್‍ಪಿ ದೋಸ್ತಿ

ಲಕ್ನೋ/ನವದೆಹಲಿ, ಜ.5 (ಪಿಟಿಐ)- ರಾಜಕೀಯದಲ್ಲಿ ಯಾರೂ ಮಿತ್ರರಲ್ಲ : ಯಾರೂ ಶತ್ರುಗಳಲ್ಲ. ಈ ಮಾತು ಉತ್ತರ ಪ್ರದೇಶದಲ್ಲೂ ನಿಜವಾಗಿದೆ. ಈ ಹಿಂದೆ ಕಡುವೈರಿಗಳಾಗಿದ್ದ ಮಯಾವತಿ(ಬಿಎಸ್‍ಪಿ) ಮತ್ತು ಅಖಿಲೇಶ್ ಯಾದವ್(ಎಸ್‍ಪಿ) ಈಗ ದೋಸ್ತಿಯಾಗುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ಈ ಎರಡು ಪಕ್ಷಗಳು ಮಹಾಮೈತ್ರಿಗೆ ಮುಂದಾಗಿದ್ದಾರೆ. ಆದರೆ ಈ ಮಹಾಘಟ್‍ಬಂಧನದಿಂದ ಕಾಂಗ್ರೆಸ್‍ನನ್ನು ದೂರವಿಟ್ಟಿದ್ಧಾರೆ.

ಮಹತ್ವದ ಬೆಳವಣಿಗೆಯಲ್ಲಿ ನಿನ್ನೆ ರಾತ್ರಿ ಬಹುಜನ ಸಮಾಜಪಕ್ಷದ ಪರಮೋಚ್ಚ ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಜಧಾನಿ ನವದೆಹಲಿಯಲ್ಲಿ ಪರಸ್ಪರ ಭೇಟಿಯಾಗಿ ಮಹಾಮೈತ್ರಿ ಬಗ್ಗೆ ಗಹನ ಚರ್ಚೆ ನಡೆಸಿದರು.

ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಮಹಾಮೈತ್ರಿ ಮೂಲಕ ಎರಡೂ ಪಕ್ಷಗಳು ತಲಾ 35 ಸ್ಥಾನಗಳಲ್ಲಿ ಹೊಂದಾಣಿಕೆಯೊಂದಿಗೆ ಸ್ಪರ್ಧಿಸಲು ಮಾತುಕತೆ ನಡೆದಿವೆ.

ಕಾಂಗ್ರೆಸ್ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಮಯಾ ಮತ್ತು ಅಖಿಲೇಶ್ ಆ ಪಕ್ಷವನ್ನು ಮಹಾಮೈತ್ರಿಯಿಂದ ದೂರುವಿಡಲು ನಿರ್ಧರಿಸಿದ್ದಾರೆ. ಈ ಮಹಾಘಟ್‍ಬಂಧನ್‍ನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮಣೆ ಹಾಕದೆ ಪ್ರಾದೇಶಿಕ ಪಕ್ಷಗಳಿಗೆ ಅವಕಾಶ ನೀಡುವ ಬಗ್ಗೆ ಮಹತ್ವದ ಮಾತುಕತೆ ನಡೆದಿದೆ ಅಜಿತ್ ಸಿಂಗ್ ನೇತೃತ್ವದ ಆರ್‍ಎಲ್‍ಡಿ ಮಹಾಮೈತ್ರಿ ಕೂಟದಲ್ಲಿ ಮೂರು ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

ಆದಾಗ್ಯೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸಿರುವ ಅಮೇಥಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಕಾರ್ಯಕ್ಷೇತ್ರ ರಾಯ್‍ಬರೇಲಿಯಲ್ಲಿ ತಮ್ಮ ಪಕ್ಷಗಳಿಂದ ಯಾವುದೇ ಸ್ಪರ್ಧಿಗಳನ್ನು ಕಣಕ್ಕೆ ಇಳಿಸದಿರಲು ಮಾಯಾವತಿ ಮತ್ತು ಅಖಿಲೇಶ್ ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಜನವರಿ 15ರ ನಂತರ ಈ ಎಲ್ಲ ಪ್ರಮುಖ ವಿಷಯಗಳ ಬಗ್ಗೆ ಉತ್ತರಪ್ರದೇಶದ ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಮುಂದಿನ ಬೆಳವಣಿಗೆ ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ