ವಿಧಾನಸೌಧದಲ್ಲಿ ಸಿಕ್ಕಿರುವ ಹಣದ ವಿಷಯವಾಗಿ ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದಕ್ಕೆ ತೀವ್ರ ಅಸಮಾಧಾನಕ್ಕೆ ಕಾರಣವಾದ ಪ್ರಕರಣ

ಬೆಂಗಳೂರು, ಜ.5-ವಿಧಾನಸೌಧದಲ್ಲಿ ನಿನ್ನೆ ಸಿಕ್ಕಿರುವ ಲಕ್ಷಾಂತರ ಹಣದ ವಿಷಯವಾಗಿ ಕಾಂಗ್ರೆಸ್ ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ನೋಟಿಸ್ ನೀಡಬೇಕೋ, ಬೇಡವೋ ಎಂಬ ಜಿಜ್ಞಾಸೆ ಕೆಪಿಸಿಸಿ ಪ್ರಮುಖರನ್ನು ಕಾಡುತ್ತಿದೆ.

ನಿನ್ನೆ ಸಂಜೆ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಕಚೇರಿಯ ಸಿಬ್ಬಂದಿ ಸುಮಾರು 25.76 ಲಕ್ಷ ರೂ.ವನ್ನು ಕಚೇರಿಯಿಂದ ಹೊರಗೆ ತೆಗೆದುಕೊಂಡು ಹೋಗುವಾಗ ಸಿಕ್ಕಿ ಬಿದ್ದಿದ್ದರು.
ಈ ಹಣದ ಬಗ್ಗೆ ಆರಂಭದಲ್ಲಿ ಗೊಂದಲಕಾರಿ ಹೇಳಿಕೆ ನೀಡಿದ್ದ ಮೋಹನ್ ಅವರು ಕೊನೆಗೆ ಆ ಹಣ ತಮ್ಮದೇ ಎಂದು ಒಪ್ಪಿಕೊಂಡಿದ್ದರು. ಒಂದು ಹಂತದಲ್ಲಿ ಹಣವನ್ನು ಸಾಹೇಬರಿಗೆ ತಲುಪಿಸಲು ಹೋಗುತ್ತಿದ್ದುದಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಅದರ ಬೆನ್ನಲ್ಲೇ ಪುಟ್ಟರಂಗಶೆಟ್ಟಿ ಅವರು ಕೂಡ ದುಗುಡ ಭರಿತರಾಗಿಯೇ ಮಾತನಾಡಿದ್ದು, ಸಾರ್ವಜನಿಕ ವಲಯದಲ್ಲಿ ಗೊಂದಲ ಮೂಡಿಸಿದೆ.ಆದರೆ, ಈ ಪ್ರಕರಣವನ್ನು ಯಾರು ನಿಭಾಯಿಸಬೇಕೆಂಬ ಗೊಂದಲ ಮೈತ್ರಿ ಸರ್ಕಾರವನ್ನು ಕಾಡತೊಡಗಿದೆ.

ನಿಯಮಗಳ ಅನುಸಾರ ಇಂತಹ ಘಟನೆಗಳು ನಡೆದಾಗ ಮುಖ್ಯಮಂತ್ರಿಯವರು ಸಂಬಂಧಪಟ್ಟ ಸಚಿವರಿಗೆ ನೋಟಿಸ್ ನೀಡಿ ವಿವರಣೆ ಪಡೆದುಕೊಳ್ಳುತ್ತಾರೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇರುವುದರಿಂದ ಜೆಡಿಎಸ್ ಪಕ್ಷಕ್ಕೆ ಸೇರಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸಚಿವರಿಗೆ ನೋಟಿಸ್ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಸಿದ್ದರಾಮಯ್ಯ ಅವರ ಬೆಂಬಲಿಗರಾದ ಪುಟ್ಟರಂಗಶೆಟ್ಟಿ ಅವರಿಗೆ ನೋಟಿಸ್ ನೀಡಿದರೆ ಅದು ಉದ್ದಟತನ ಆಗಬಹುದು.ಮುಂದೊಂದು ದಿನ ಮೈತ್ರಿ ಸರ್ಕಾರಕ್ಕೂ ಧಕ್ಕೆಯಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಮೈತ್ರಿ ಸರ್ಕಾರದ ಗೊಂದಲಗಳ ನಡುವೆ ಸಿದ್ದು ಬೆಂಬಲಿಗನನ್ನು ಪ್ರಶ್ನಿಸಲು ಕಾಂಗ್ರೆಸ್ ಪಕ್ಷ ಕೂಡ ಹಿಂಜರಿಯುತ್ತಿದೆ.ಗಂಭೀರ ಸ್ವರೂಪದ ಘಟನೆ ವರದಿಯಾಗಿದ್ದರೂ ಪಕ್ಷ ಈವರೆಗೂ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳದೆ ನುಣುಚಿಕೊಳ್ಳುವ ಪ್ರಯತ್ನ ನಡೆಸುತ್ತಿದೆ.

ಹಣ ಸಿಕ್ಕಿರುವುದು ಸಚಿವರ ಕಚೇರಿ ಸಿಬ್ಬಂದಿ ಬಳಿ, ಆ ಹಣಕ್ಕೂ ಸಚಿವರಿಗೂ ಯಾವುದೇ ಸಂಬಂಧ ಇಲ್ಲದೇ ಇರಬಹುದು. ಸಚಿವರು ನೇರವಾಗಿ ಯಾವುದರಲ್ಲೂ ಭಾಗಿಯಾಗದೇ ಇರುವುದರಿಂದ ನೋಟಿಸ್ ನೀಡುವುದು ಸಮಂಜಸ ಎನಿಸುವುದಿಲ್ಲ. ಒಂದು ವೇಳೆ ಮೋಹನ್ ಅವರು ಆ ಹಣ ತಮ್ಮದೆ ಎಂದು ಸಾಬೀತುಪಡಿಸಿ ಅದಕ್ಕೆ ಪೂರಕವಾದ ಮೂಲವನ್ನು ಹಾಜರುಪಡಿಸಿದರೆ ಪ್ರಕರಣ ಮುಕ್ತಾಯಗೊಳ್ಳುತ್ತದೆ. ಅನಗತ್ಯವಾಗಿ ಸಚಿವರಿಗೆ ನೋಟಿಸ್ ನೀಡಿ ಮುಜುಗರಕ್ಕೀಡಾಗುವುದು ಸರಿಯಲ್ಲ ಎಂಬ ವಾದ ಪಕ್ಷದಲ್ಲಿ ನಡೆಯುತ್ತಿದೆ.

ಒಂದು ವೇಳೆ ತನಿಖೆಯಿಂದ ಆ ಹಣ ಸಚಿವರಿಗೆ ಸೇರಿದ್ದು ಎಂದು ಸಾಬೀತಾದರೆ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸುವುದಾಗಿ ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಮಾತ್ರ ಸೂಕ್ತವ್ಯಕ್ತಿಗಳು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪುಟ್ಟರಂಗಶೆಟ್ಟಿ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಲಾಗುತ್ತಿದೆ ಎನ್ನಲಾಗಿದೆ.

ಇಡೀ ಘಟನೆಯಲ್ಲಿ ಅನಾಮಧೇಯ ಹಣ ಅನಾಥವಾಗಿದ್ದು, ತಪ್ಪಿತಸ್ಥರು ಯಾರು ಎಂಬ ಪ್ರಶ್ನೆ ನಿಗೂಢವಾಗಿದೆ. ಗಂಭೀರ ಪ್ರಕರಣವಾಗಿರುವ ಈ ಬಗ್ಗೆ ತನಿಖೆ ನಡೆಸಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ.
ಕಾಂಗ್ರೆಸ್‍ನ ಒಂದು ವರ್ಗ ಇದನ್ನೇ ನೆಪವಾಗಿಟ್ಟುಕೊಂಡು ಹೈಕಮಾಂಡ್‍ಗೆ ದೂರು ನೀಡಲು ಮುಂದಾಗಿದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ