ನವದೆಹಲಿ, ಜ.5 (ಪಿಟಿಐ)- ಈಶಾನ್ಯ ರಾಜ್ಯ ಮೇಘಾಲಯದಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಗಳಿಗೆ ಕಡಿವಾಣ ಹಾಕಲು ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ಜಿಟಿ) 100 ಕೋಟಿ ರೂ.ಗಳ ದಂಡ ವಿಧಿಸಿದೆ.
ಮೇಘಾಲಯದ ಬಹುತೇಕ ಗಣಿಗಳು ಗುತ್ತಿಗೆ ಕರಾರು ಒಪ್ಪಂದಗಳು ಅಥವಾ ಪರವಾನಗಿಗಳಿಲ್ಲದೇ ಕಾರ್ಯನಿರ್ವಹಿಸುತ್ತಿವೆ ಎಂದು ಉನ್ನತಮಟ್ಟದ ಸಮಿತಿ ವರದಿಯಲ್ಲಿ ತಿಳಿಸಲಾಗಿದೆ.
ಉನ್ನತ ಮಟ್ಟದ ಸಮಿತಿಯ ವರದಿಯನ್ನು ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ.ಗೋಯಿಲ್ ಅವರ ನೇತೃತ್ವದ ಪೀಠಕ್ಕೆ ಸಲ್ಲಿಸಲಾಗಿದೆ ಎಂದು ಈ ವಿಷಯದಲ್ಲಿ ಅಮಿಕಸ್ ಕ್ಯೂರೀ(ನ್ಯಾಯಾಲಯ ಮಿತ್ರ) ಆಗಿ ನ್ಯಾಯಮಂಡಳಿಗೆ ನೆರವು ನೀಡುತ್ತಿರುವ ಹಿರಿಯ ವಕೀಲರೊಬ್ಬರು ತಿಳಿಸಿದ್ದಾರೆ.
ವರದಿಯಲ್ಲಿನ ಅಂಶಗಳನ್ನು ಪರಿಗಣಿಸಿದ ಎನ್ಜಿಟಿ, ಅಕ್ರಮ ಮತ್ತು ಅನಧಿಕೃತ ಗಣಿಗಳು ಮತ್ತು ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳಿಗೆ ಲಗಾಮು ಹಾಕುವಲ್ಲಿ ವಿಫಲವಾಗಿರುವ ಮೇಘಾಲಯ ಸರ್ಕಾರಕ್ಕೆ 100 ಕೋಟಿ ರೂ.ಗಳ ದಂಡ ವಿಧಿಸಿದೆ.