ಹಣದೊಂದಿಗೆ ಸಿಕ್ಕಿಬಿದ್ದ ಸಚಿವರ ಕಚೇರಿ ಸಿಬ್ಬಂದಿ, ತನಿಖೆಯ ನಂತರ ಸೂಕ್ತ ಕ್ರಮ : ದಿನೇಶ್ ಗುಂಡುರಾವ್

ಬೆಂಗಳೂರು, ಜ.5- ವಿಧಾನಸೌಧದಲ್ಲಿ ಸಚಿವರ ಕಚೇರಿ ಸಿಬ್ಬಂದಿ ಹಣದೊಂದಿಗೆ ಸಿಕ್ಕಿ ಬಿದ್ದಿರುವ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಯಲಿ.ವರದಿ ಬಂದ ನಂತರ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅಂತಹವರ ವಿರುದ್ಧ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು.

ಕಾಂಗ್ರೆಸ್ ಕಚೇರಿಯಲ್ಲಿಂದು ಕೋಲಾರ ಜಿಲ್ಲೆಯ ಬಿಜೆಪಿ ನಾಯಕ ಬಿಸ್ಸೇಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಚೇರಿ ಸಿಬ್ಬಂದಿ ಹಣ ತೆಗೆದುಕೊಂಡು ಹೋಗಿರುವ ಬಗ್ಗೆ ಸಚಿವರನ್ನು ಹೊಣೆ ಮಾಡುವುದು ಸರಿಯಲ್ಲ ಎಂದರು.

ಕೆಪಿಸಿಸಿ ಕಚೇರಿಯಲ್ಲಿ ಸಾಕಷ್ಟು ಸಿಬ್ಬಂದಿಗಳಿದ್ದಾರೆ.ಯಾರೋ ಹಣ ತೆಗೆದುಕೊಂಡು ಹೋದರೆ ಅದಕ್ಕೆ ನಾನು ಜವಾಬ್ದಾರಿಯಾಗುತ್ತೇನೆಯೇ ಎಂದು ಪ್ರಶ್ನಿಸಿದರು.

ಈ ನಡುವೆ ಬಿಜೆಪಿಯವರು ಸಚಿವ ಪುಟ್ಟರಂಗಶೆಟ್ಟಿ ಅವರ ರಾಜೀನಾಮೆ ಕೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್‍ಗುಂಡೂರಾವ್, ಈ ಹಿಂದೆ ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ಆಪ್ತ ಸಹಾಯಕರ ನಡುವೆ ಕಿಡ್ಯಾಪ್ ಪ್ರಕರಣ ನಡೆದು ದೂರು ದಾಖಲಾಗಿ ಪೊಲೀಸ್ ತನಿಖೆ ನಡೆದಿತ್ತು. ಅ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ಇದೆ.ಆದರೂ ಈಶ್ವರಪ್ಪ ಹಾಗೂ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ. ಈಗ ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆ ಕೇಳಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ 30ಸಾವಿರ ಕೋಟಿಯ ರಫೇಲ್ ಹಗರಣದಲ್ಲಿ ಸಿಲುಕಿದೆ.ಅದರ ಮುಂದೆ 20ಲಕ್ಷ ಯಾವ ಲೆಕ್ಕಾ ಎಂದು ಪ್ರಶ್ನಿಸಿದ ಅವರು, ಮೋದಿ ಅವರು ಕನಿಷ್ಠ ರಫೇಲ್ ಹಗರಣವನ್ನು ಸಂಸತ್‍ನ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಲು ಒಪ್ಪುತ್ತಿಲ್ಲ. ಭ್ರಷ್ಟಾಚಾರದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಎಲ್ಲಾ ಕಾಲಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ.ತಪ್ಪು ಮಾಡಿದವರನ್ನು ಯಾವ ಸಂದರ್ಭದಲ್ಲೂ ರಕ್ಷಿಸುವ ಕೆಲಸ ಮಾಡಿಲ್ಲ. ನಿನ್ನೆಯ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಲಿ. ಒಂದು ವೇಳೆ ಸಚಿವರು ಅಥವಾ ಯಾರೇ ಭಾಗಿಯಾಗಿದ್ದರೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.

ಪೊಲೀಸರು ಹಣ ಯಾರದ್ದು ?ಯಾರಿಗೆ ಸೇರಿದ್ದು?ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬ ವಿಷಯಗಳ ಬಗ್ಗೆ ನಿಷ್ಪಕ್ಷವಾಗಿ ಸಮಗ್ರ ತನಿಖೆ ನಡೆಸಲಿ.ತನಿಖೆ ಪೂರ್ಣಗೊಳ್ಳುವವರೆಗೂ ಅನಗತ್ಯವಾಗಿ ಯಾರ ವಿರುದ್ಧವೂ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ