ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಮುಕ ಘಟಕಗಳ ಜವಬ್ದಾರಿ ಮುಖ್ಯವಾದದ್ದು : ಈಶ್ವರ್ ಖಂಡ್ರೆ

ಬೆಂಗಳೂರು, ಜ.5- ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂಚೂಣಿ ಘಟಕಗಳ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.

ಪಕ್ಷದ ಕಚೇರಿಯಲ್ಲಿಂದು ಕೆಪಿಸಿಸಿಯ ಕಿಸಾನ್ ಘಟಕ, ಮಹಿಳಾ ಘಟಕ, ಹಿಂದುಳಿದ ವರ್ಗಗಳ ಘಟಕ, ಅಲ್ಪಸಂಖ್ಯಾತರ ಘಟಕ, ಕಾರ್ಮಿಕ ಘಟಕ, ಯುವ ಘಟಕ, ಎಸ್ಸಿ-ಎಸ್ಟಿ ಘಟಕ ಸೇರಿದಂತೆ ಹಲವು ಮುಂಚೂಣಿ ಘಟಕಗಳ ಅಧ್ಯಕ್ಷರ ಜತೆ ಸಭೆ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು. ಪಕ್ಷ ಅಧಿಕಾರಕ್ಕೆ ಬರಲೇಬೇಕು, ರಾಹುಲ್‍ಗಾಂಧಿ ಪ್ರಧಾನಿಯಾಗಬೇಕು.ಈ ನಿಟ್ಟಿನಲ್ಲಿ ನಾವು ಅತಿ ಹೆಚ್ಚು ಶ್ರಮವಹಿಸಿ ದುಡಿಯಬೇಕು ಎಂದರು.

ರಾಜ್ಯದಲ್ಲಿ ಸದ್ಯದಲ್ಲಿ ಬರ ಪರಿಸ್ಥಿತಿ ಇದೆ. ಇದನ್ನು ಸಮರ್ಥವಾಗಿ ಎದುರಿಸಬೇಕು.ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ಜನ ಇದರಿಂದಾಗಿಯೇ ಹೆಚ್ಚು ಸಂತ್ರಸ್ತರಾಗುತ್ತಾರೆ.ಇದಕ್ಕೆ ಅವಕಾಶ ನೀಡದಂತೆ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕು.ಕಾಂಗ್ರೆಸ್ ಶಾಸಕರಿರುವ ಕಡೆ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತನ್ನಿ, ಬಿಜೆಪಿ ಶಾಸಕರಿರುವ ಕಡೆಯೂ ನಮ್ಮ ಮುಚೂಣಿ ಘಟಕಗಳ ಕಾರ್ಯಕರ್ತರು ಕ್ರಿಯಾಶೀಲರಾಗಬೇಕು.ಬರ ಪರಿಹಾರ ಕಾಮಗಾರಿಗಳ ಬಗ್ಗೆ ನಿಗಾವಹಿಸಬೇಕು.ಕುಡಿಯುವ ನೀರಿನ ಸಮಸ್ಯೆ ಪೀಡಿತ ಪ್ರದೇಶಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಮುಖಂಡರ ಜತೆ ಚರ್ಚೆ ಮಾಡಬೇಕು.ಅಧಿಕಾರಿಗಳ ಗಮನ ಸೆಳೆಯಬೇಕು, ಬರ ಪರಿಸ್ಥಿತಿಯಲ್ಲಿ ಜನರ ನಡುವೆ ಇದ್ದು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಅಧ್ಯಕ್ಷ ಲಕ್ಷ್ಮಿನಾರಾಯಣ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕಾರ್ಮಿಕ ಘಟಕದ ಎಸ್.ಎಸ್.ಪ್ರಕಾಶಂ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ