ಹಾಲಿವುಡ್ ಸಿನಿಮಾ ಮೀರಿಸುವ ಶೈಲಿಯಲ್ಲಿ ಬ್ಯಾಂಕ್‍ ದರೋಡೆ : 50 ಲಕ್ಷ ರೂ.ಗಳಿಗೂ ಹೆಚ್ಚು ನಗದಿನೊಂದಿಗೆ ಪರಾರಿ

ಗುರ್‍ಗಾಂವ್(ಗುರುಗ್ರಾಮ), ಜ.5-ಇದು ಹಾಲಿವುಡ್ ಸಿನಿಮಾ ದೃಶ್ಯಗಳನ್ನು ಮೀರಿಸುವ ಚಾಲಾಕಿ ಲೂಟಿಕೋರರ ಕೃತ್ಯ. 10 ದರೋಡೆಕೋರರ   ಗುಂಪೊಂದು ಸಾಂತಾ ಕ್ಲಾಸ್(ಕ್ರಿಸ್ಮಸ್ ತಾತಾ) ವೇಷ ಧರಿಸಿ 14 ಅಂಗಡಿಗಳು ಮತ್ತು ಬ್ಯಾಂಕ್‍ಗಳಲ್ಲಿ ರಾಬರಿ ಮಾಡಿ 50 ಲಕ್ಷ ರೂ.ಗಳಿಗೂ ಹೆಚ್ಚು ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿರುವ ಘಟನೆ ರಾಜಧಾನಿ ದೆಹಲಿ ಸಮೀಪ ಗುರ್‍ಗಾಂವ್(ಗುರುಗ್ರಾಮ)ನ ಖಂಡಸಾ ರಸ್ತೆ ಪ್ರದೇಶದಲ್ಲಿ ನಡೆದಿದೆ.

ದರೋಡೆಕೋರರ ಹೊಸ ತಂತ್ರದಿಂದ ಪೊಲೀಸ್ ಇಲಾಖೆ ಬೆಚ್ಚಿಬಿದ್ದಿದೆ. ಸಿಸಿಟಿವಿ ಕ್ಯಾಮೆರಾಗಳು ಈ ಕೃತ್ಯಗಳನ್ನು ಸೆರೆ ಹಿಡಿದಿದ್ದರೂ, ಚಾಲಾಕಿಗಳು ಸಾಂತಾ ಕ್ಲಾಸ್ ಮಾಸ್ಕ್ ಧರಿಸಿದ್ದರಿಂದ ಅವರನ್ನು ಗುರುತಿಸುವುದು ಕಷ್ಟಕರವಾಗಿದೆ.

ಬೆಳಗ್ಗೆ ದಟ್ಟ ಮಂಜು ಸುರಿಯುತ್ತಿದ್ದಾಗ ವಾತಾವರಣದ ದುರ್ಲಾಭ ಪಡೆದ 10 ಮಂದಿ ದರೋಡೆಕೋರರು ಸಾಂತಾಕ್ಲಾಸ್ ಮಾಸ್ಕ್‍ಗಳನ್ನು ಧರಿಸಿ ಖಂಡಸಾ ರಸ್ತೆಯ ವಾಣಿಜ್ಯ ಸಂಕೀರ್ಣವೊಂದಕ್ಕೆ ನುಗ್ಗಿ ನಾಲ್ಕು ಅಂಗಡಿಗಳು ಮತ್ತು ಎರಡು ಬ್ಯಾಂಕ್‍ಗಳೂ ಸೇರಿದಂತೆ 14 ವಾಣಿಜ್ಯ ಮಳಿಗೆಗಳಲ್ಲಿ ದರೋಡೆ ಮತ್ತು ಕಳ್ಳತನ ನಡೆಸಿ ಲಕ್ಷಾಂತರ ರೂ. ನಗದು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ ಈ ಕೃತ್ಯ ನಡೆದ ಸ್ಥಳವು ಶಿವಾಜಿನಗರ ಎಸಿಪಿ ಕಚೇರಿಯಿಂದ ಕೇವಲ 500 ಮೀಟರ್ ಮತ್ತು ಪೊಲೀಸ್ ಆಯುಕ್ತರ ಕಚೇರಿಯಿಂದ 400 ಮೀಟರ್‍ಗಳಷ್ಟು ಮಾತ್ರ ದೂರವಿದೆ.

ಮುಂಜಾನೆಯೇ ಈ ಕಳ್ಳರು 14 ವಾಣಿಜ್ಯ ಮಳಿಗೆಗಳು ಮತ್ತು ಬ್ಯಾಂಕ್‍ಗಳಲ್ಲಿ ಲೂಟಿ ಮಾಡಿದ ನಂತರ ಓಲ್ಡ್ ಜೈಲ್ ಕಾಂಪ್ಲೆಕ್ಸ್ ಬಳಿ ಯೂಕೋ ಮತ್ತು ಇಂಡಸ್ ಬ್ಯಾಂಕ್ ಶಾಖೆಗಳಲ್ಲಿ ಡ್ರಿಲ್ಲಿಂಗ್(ಬೈರಿಗೆ) ಯಂತ್ರಗಳಿಂದ ಕೊರೆದು ಹಣ ದೋಚಲು ಯತ್ನಿಸಿದರು. ಆದರೆ ಶಬ್ಧದಿಂದ ಅಕ್ಕಪಕ್ಕದವರ ಎಚ್ಚೆತ್ತ ನಂತರ ಪರಾರಿಯಾದರು.

ಸುದ್ಧಿ ತಿಳಿದ ಕೂಡಲೇ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಶೇಷ ದಳ ಶ್ವಾನದಳಗಳೊಂದಿಗೆ ತಪಾಸಣೆ ನಡೆಸಿದರು.

ದರೋಡೆಕೋರರು ಲೂಟಿ ಮಾಡಿರುವ ನಗದು ಮತ್ತು ಇತರ ವಸ್ತುಗಳ ಮೌಲ್ಯವು 50 ಲಕ್ಷ ರೂ.ಗಳಿಗೂ ಹೆಚ್ಚು ಎಂದು ಎಸಿಪಿ ರಾಜೀವ್ ಕುಮಾರ್ ಅಂದಾಜು ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ