ರಾಜ್ಯದ ಕ್ರೈಂ ಜಗತ್ತನಲ್ಲಿ ಇವತ್ತಿಗೂ ಕಣ್ಣ ಮುಂದೆ ಬರುವುದು ನೆಲಮಂಗಲ ತಾಲ್ಲೂಕು

ಬೆಂಗಳೂರು,ಜ.5- ಕರ್ನಾಟಕದ ಕ್ರೈಂ ಜಗತ್ತಿನಲ್ಲ್ಲಿ ತುಂಬಾ ದಿನಗಳ ಕಾಲ ಹರಿದಾಡಿದ್ದ ಹೆಸರು.. ಇವತ್ತಿಗೂ ಈ ಹೆಸರು ಕೇಳಿದ್ರೆ ಥಟ್ ಅಂತಾ ಕಣ್ಣ ಮುಂದೆ ಬಂದು ನಿಲ್ಲೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು.

ಬೆತ್ತನಗೆರೆ ರಕ್ತ ಚರಿತ್ರೆಯಲ್ಲಿ ಬಿದ್ದ ಸಾಲು ಸಾಲು ಹೆಣಗಳು ನೆಲಮಂಗಲಕ್ಕೆ ಕ್ರೈಂನ ಉಪ ರಾಜಧಾನಿ ಅನ್ನೋ ಪಟ್ಟವನ್ನೇ ತಂದಿತ್ತು.ಬೆತ್ತನಗೆರೆ ಸೀನನ ಎನ್‍ಕೌಂಟರ್ ನಂತರ ಇಡೀ ನೆಲಮಂಗಲ ವೃತ್ತವನ್ನು ಪೊಲೀಸರು ಕ್ಲೀನ್ ಮಾಡಿದ್ದರು.ಸರಿಸುಮಾರು ಐದಾರು ವರ್ಷಗಳಿಂದ ಶಾಂತವಾಗಿದ್ದ ನೆಲಮಂಗಲದಲ್ಲಿ ಇದೀಗ ಮತ್ತೆ ಕ್ರೈಂ ತನ್ನ ಕದಂಬ ಬಾಹುವನ್ನು ತೆರೆದುಕೊಳ್ಳುತ್ತಿದೆ…ಕೈಗೆ ರಕ್ತ ಮೆತ್ತಿಸಿಕೊಳ್ಳಲು ರೌಡಿ ಕುಳಗಳು ಅಡ್ಡೆಗಳನ್ನು ಆರಂಭಿಸತೊಡಗಿವೆ.

ರಾಜಧಾನಿ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಆಯುಕ್ತ ಸುನಿಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಮತ್ತು ಡಿಸಿಪಿಗಳು ರೌಡಿ ಚಟುವಟಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಿದ ಪರಿಣಾಮ ಬೆಂಗಳೂರಿಗೆ ಹೊಂದಿಕೊಂಡೇ ಇರುವ ನೆಲಮಂಗಲದಲ್ಲಿ ಅಪರಾಧ ಜಗತ್ತು ಮತ್ತೆ ಬಾಲ ಬಿಚ್ಚ ತೊಡಗಿದೆ.

ಬೆಂಗಳೂರಿನಲ್ಲಿ ಆಟ ನಡೆಸುತ್ತಿದ್ದ ರಿಯಲ್ ಎಸ್ಟೇಟ್, ಸ್ಕಿಲ್ ಗೇಮ್, ಲೇಡಿ ಪಿಜಿಗಳನ್ನೇ ದುರ್ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆ, ದೊಡ್ಡ ದೊಡ್ಡ ಗೋಡೌನ್‍ಗಳಲ್ಲಿ ಕ್ಯಾಸಿನೋ ಮಾದರಿ ಮೋಜಿನ ಆಟ, ನಕಲಿ ಮದ್ಯದ ದಂಧೆಯು ಶುರುವಾಗಿದೆ.

ನೆಲಮಂಗಲ ಡಿವೈಎಸ್‍ಪಿ ವ್ಯಾಪ್ತಿಯ ಮಾದನಾಯಕನಹಳ್ಳಿ, ದಾಬಸ್‍ಪೇಟೆ, ತ್ಯಾಮಗೊಂಡ್ಲು, ನೆಲಮಂಗಲ ಗ್ರಾಮಾಂತರ ಪೆÇಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಅಪರಾಧ ಲಿಮಿಟ್(ನಿಯಂತ್ರಣ) ಮೀರಿ ಬೆಳೆದುಕೊಳ್ಳುತ್ತಿದೆ. ಬೆಂಗಳೂರು ನಗರ ಪ್ರದೇಶದ ಭಾಗಗಳೂ ಸೇರಿಕೊಂಡಿರೋದರಿಂದ ಮಾದನಾಯಕನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ ಅಡಗಿದ್ದ ಆಟಗಳೆಲ್ಲಾ ತೆರೆದುಕೊಂಡಿವೆ.

ಇನ್ನು ದಾಬಸ್‍ಪೇಟೆ ಮತ್ತು ನೆಲಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಗಳಲ್ಲಿ ಅತಿ ಹೆಚ್ಚು ಕೈಗಾರಿಕಾ ಪ್ರದೇಶ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಸಹಜವಾಗಿಯೇ ರಿಯಲ್ ಎಸ್ಟೇಟ್ ಮತ್ತು ಇತರೆ ಹಣಕಾಸು ಹರಿದಾಡುವ ವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿವೆ. ಇದನ್ನೇ ಲಾಭ ಮಾಡಿಕೊಂಡ ಬೆತ್ತನಗೆರೆ ರೌಡಿ ಅಡ್ಡೆಯ ಪಳೆಯುಳಿಕೆಗಳು ಮತ್ತು ಇತರೆ ಮರಿ ರೌಡಿಗಳೇ ತಲೆನೋವಾಗಿ ಪರಿಣಮಿಸಿದ್ದಾರೆ.

ನೆಲಮಂಗಲ ವೃತ್ತದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿರುವ ಹುಳುಕನ್ನೇ ಇಲ್ಲಿ ಬಂಡವಾಳ ಮಾಡಿಕೊಳ್ಳಲಾಗಿದೆ.ಈ ಹಿಂದೆ ಬೆತ್ತನಗೆರೆ ರೌಡಿಗಳ ಅಟ್ಟಹಾಸ ನಡೆಯುತ್ತಿದ್ದಾಗ ಸರಿ ಸುಮಾರು 15 ರಿಂದ 20 ವರ್ಷಗಳಿಂದ ಜಾಂಡಾ ಹೂಡಿದ್ದ ಕಾನ್ಸ್‍ಟೇಬಲ್‍ಗಳನ್ನು ಬೇರೆ ವೃತ್ತಕ್ಕೆ ಎತ್ತಂಗಡಿ ಮಾಡಲಾಗಿತ್ತು. ಇದೀಗ ಗುರುತರ ಆರೋಪಗಳನ್ನು ಹೊತ್ತಿದ್ದ ಅಂತಹ ಐದಾರು ಪೇದೆಗಳು ತಮ್ಮ ಪ್ರಭಾವ ಬಳಸಿ ಹಿರಿಯ ಅಧಿಕಾರಿಗಳ ಆಪ್ತ ಸಹಾಯಕರಾಗಿ ಬಂದಿದ್ದಾರೆ. ತಮ್ಮ ಹಳೇ ಚಾಳಿ ಮುಂದುವರೆಸಿರುವ ಈ ಪೇದೆಗಳು ಹಣದ ಮೂಲಗಳನ್ನು ಲಿಂಕ್ ಮಾಡಿಕೊಟ್ಟಿದ್ದಾರೆ. ಬಾರ್ ರೆಸ್ಟೋರೆಂಟ್‍ಗಳು, ವೈನ್ ಸ್ಟೋರ್‍ಗಳು, ಡಾಬಾಗಳಿಗೆ ತಿಂಗಳ ಪೇಮೆಂಟ್ ಕೂಡಾ ಫಿಕ್ಸ್ ಆಗಿದೆ. ಇದೆಲ್ಲಕ್ಕಿಂತಲೂ ಆತಂಕಕಾರಿ ಎಂದರೆ ಗೋಡೌನ್‍ಗಳನ್ನೇ ಕ್ಯಾಸಿನೋ ಅಡ್ಡೆಗಳನ್ನಾಗಿ ಮಾಡುತ್ತಿರುವುದು.

ಕಳೆದ ಕೆಲ ದಿನಗಳ ಹಿಂದೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಖ್ಯಾತ ರೌಡಿಯೊಬ್ಬನ ಆಶ್ರಯದಲ್ಲಿ ನಗರೂರು ಬಳಿ ಗೋಡೌನ್‍ನಲ್ಲಿ ನಡೆಯುತ್ತಿರುವ ಅಕ್ರಮ ಕ್ಯಾಸಿನೋದಲ್ಲಿ ರೌಡಿಯೊಬ್ಬ ನೇಮಿಸಿಕೊಂಡಿದ್ದ ಬೌನ್ಸರ್‍ಗೆ ಮಿಸ್ ಫೈರಿಂಗ್ ಆಗಿತ್ತು.ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ಆಗಿದೆ.ಆಸ್ಪತ್ರೆ ವೈದ್ಯರೇ ಮಿಸ್ ಫೈರಿಂಗ್‍ನಿಂದ ಬೌನ್ಸರ್‍ಗೆ ಗಾಯವಾಗಿರೋ ಬಗ್ಗೆ ಮಾದನಾಯಕನಹಳ್ಳಿ ಠಾಣೆಗೆ ಮೆಮೋ ನೀಡಿದ್ದರೂ ಪೊಲೀಸರು ಮಾತ್ರ ಬೌನ್ಸರ್ ಮನೆಯವರು ಮುಂದೆ ಬರ್ತಿಲ್ಲ ಅನ್ನೋ ನೆಪ ಹೇಳಿ ದೂರನ್ನೇ ದಾಖಲಿಸಿಕೊಂಡಿಲ್ಲ.

ನೆಲಮಂಗಲ ಪಟ್ಟಣದಲ್ಲೇ ಇತ್ತೀಚೆಗೆ ಸಾರ್ವಜನಿಕರ ಬಳಿ ಲಕ್ಷಾಂತರ ರೂಪಾಯಿ ನಗದು ದರೋಡೆ ಮಾಡಲಾಗಿತ್ತು. ದ್ವಿಚಕ್ರ ವಾಹನಗಳನ್ನು ಅಪಹರಿಸುವ ಪ್ರಕರಣಗಳೂ ಹೆಚ್ಚುತ್ತಿವೆ. ಹೆದ್ದಾರಿ ದರೋಡೆಗಳೂ ಅತಿಯಾಗುತ್ತಿವೆ. ಮತ್ತೆ ರೌಡಿಸಂ ಕಡೆಗೆ ನೆಲಮಂಗಲ ಜಾರಿಕೊಳ್ಳುತ್ತಿದೆ.

ಆರು ತಿಂಗಳ ಕಾಲ ನೆಲಮಂಗಲ ವಲಯಕ್ಕೆ ಡಿವೈಎಸ್‍ಪಿಯೇ ಇರಲಿಲ್ಲ. ಅದಾದ ಮೇಲೆ ಇನ್ಸ್‍ಪೆಕ್ಟರ್ ಮತ್ತು ಪಿಎಸ್‍ಐಗಳ ನೇಮಕದಲ್ಲೂ ವ್ಯತ್ಯಾಸ ಆಗಿತ್ತು. ಇದೆಲ್ಲಾ ಪೊಲೀಸ್ ನ್ಯೂನತೆಗಳು ಒಂದೆಡೆಯಾದರೆ ಒಂದೇ ಸ್ಥಳದಲ್ಲಿ ಜಾಂಡಾ ಹೂಡಿ ಅಕ್ರಮ ಅಡ್ಡೆಗಳ ಲಿಂಕ್ ಇಟ್ಟುಕೊಂಡಿರೋ ಕೆಲ ಕಾನ್ಸ್‍ಟೇಬಲ್‍ಗಳು, ಹಣದ ಆಸೆಗೆ ಬಿದ್ದು ಅಕ್ರಮಕ್ಕೆ ಸಾಥ್ ಕೊಡ್ತಿರೋ ಕೆಲ ಪೊಲೀಸ್ ಅಧಿಕಾರಿಗಳು ಮತ್ತೊಂದು ಕಡೆ ರಾಜಕೀಯ ಹಸ್ತಕ್ಷೇಪ..ಇಡೀ ನೆಲಮಂಗಲದ ಕಾನೂನು ಸುವ್ಯವಸ್ಥೆಗೆ ಭಂಗ ತಂದಿದೆ.

ನೆಲಮಂಗಲಕ್ಕೆ ಬಂದಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಈ ಹಿಂದೆ ಇದ್ದ ಕಡೆ ಉತ್ತಮ ಹೆಸರನ್ನೇ ಮಾಡಿದ್ದರು.ಆದ್ರೆ ಇಲ್ಲಿ ಮಾತ್ರ ಗೊತ್ತಿದ್ದೂ ಗೊತ್ತಿಲ್ಲದಂತೆ ಇದ್ದಾರೆ.ಯಾವುದಾದರೂ ದೊಡ್ಡ ಒತ್ತಡ ನೆಲಮಂಗಲ ಉಪವಿಭಾಗದ ಹಿರಿಯ ಅಧಿಕಾರಿಗಳ ಕೈಕಟ್ಟಿ ಹಾಕಿದೆಯೇ ಅನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ರೌಡಿಗಳ ಅಟ್ಟಹಾಸ ಮಿತಿ ಮೀರುವ ಮುನ್ನ ಸರ್ಕಾರವೂ ಎಚ್ಚೆತ್ತುಕೊಳ್ಳಬೇಕಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ