ನಟರಾದ ಪುನೀತ್, ಸುದೀಪ್ ಮತ್ತು ಶಿವಣ್ಣ ಅವರ ನಿವಾಸದಲ್ಲಿ ಮುಕ್ತಾಯಗೊಂಡ ಐಟಿ ದಾಳಿ

ಬೆಂಗಳೂರು,ಜ.5-ಸ್ಯಾಂಡಲ್‍ವುಡ್‍ನ ಸ್ಟಾರ್ ನಟರಾದ ಶಿವರಾಜ್‍ಕುಮಾರ್, ಪುನೀತ್, ಸುದೀಪ್ ಅವರ ನಿವಾಸ,ಕಚೇರಿ ಮೇಲೆ ಕಳೆದೆರಡು ದಿನಗಳಿಂದಿ ನಡೆಯುತ್ತಿರು ಐಟಿ ದಾಳಿ ತಡರಾತ್ರಿ ಮುಕ್ತಾಯಗೊಂಡಿದ್ದು, ಯಶ್ ಅವರ ಹೊಸಕೆರೆ ನಿವಾಸದಲ್ಲಿ ಇಂದೂ ಕೂಡಾ ಶೋಧ ಕಾರ್ಯ ಮುಂದುವರೆದಿದೆ.

ಕಳೆದ ಗುರುವಾರ ಮುಂಜಾನೆ ಹ್ಯಾಟ್ರಿ ಹೀರೋ ಶಿವರಾಜ್‍ಕುಮಾರ್ ಅವರ ಮಾನ್ಯತಾ ಟೆಕ್ ಪಾರ್ಕ್ ಬಳಿಯ ನಿವಾಸಕ್ಕೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಇಂದು ಮುಂಜಾನೆ 5 ಗಂಟೆಗೆ ಪರಿಶೀಲನೆ ಅಂತ್ಯಗೊಳಿಸಿದೆ. ಶಿವಣ್ಣರ ಮನೆಗೆ ಆಗಮಿಸಿದ್ದ 10 ಜನ ಅಧಿಕಾರಿಗಳ ತಂಡ ಸತತ 33 ಗಂಟೆ ಪರಿಶೀಲನೆ ನಡೆಸಿದ್ದಾರೆ.

ಎರಡು ದಿನಗಳ ದಾಖಲೆ ಪರಿಶೀಲನೆಯಲ್ಲಿ ಶಿವಣ್ಣ ಅವರ ಆದಾಯ ಮೂಲ, ಹೂಡಿಕೆಗಳು, ಬ್ಯಾಂಕ್ ವಹಿವಾಟು, ಚಿತ್ರಗಳ ಸಂಭಾವನೆ, ಚಿನ್ನಾಭರಣ ಸೇರಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಐಟಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.

ನಂತರ ಮಾತನಾಡಿದ ಶಿವರಾಜ್ ಕುಮಾರ್, ಐಟಿ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ದಾಖಲೆ ಪತ್ರಗಳನ್ನು ಅಧಿಕಾರಿಗಳು ಕೊಂಡೊಯ್ದಿದ್ದಾರೆ.ಚುನಾವಣೆಗೆ ನಿಂತಿದ್ದರಿಂದ ಗೀತಾ ಅವರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಕರೆದರೆ ಹಾಜರಾಗುತ್ತೇವೆ ಎಂದಿದ್ದಾರೆ.
ಇನ್ನು ನಟ ಕಿಚ್ಚ ಸುದೀಪ್ ಅವರ ಜೆಪಿನಗರ ನಿವಾಸದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನಡೆಸುತ್ತಿದ್ದ ದಾಳಿ ಇಂದು ಬೆಳಗ್ಗೆ ಅಂತ್ಯಗೊಂಡಿದೆ.

ತೆರಿಗೆ ಪಾವತಿ ವಂಚನೆ ಅನುಮಾನದ ಮೇಲೆ ಸತತ 47 ಗಂಟೆಯಿಂದ ಸುದೀಪ್ ಮನೆಯಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದ 8 ಐಟಿ ಅಧಿಕಾರಿಗಳು ಬೆಳಗ್ಗೆ 5.30ರ ಸುಮಾರಿಗೆ ಪರಿಶೀಲನೆ ಮುಕ್ತಾಯಗೊಳಿಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ನಟ ಪುನೀತ್ ರಾಜ್‍ಕುಮಾರ್ ಅವರ ಸದಾಶಿವನಗರ ನಿವಾಸದಲ್ಲೂ ಐಟಿ ದಾಳಿ ಅಂತ್ಯಗೊಂಡಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪುನೀತ್, ಐಟಿ ರೇಡ್ ಮುಕ್ತಾಯಗೊಂಡಿದೆ.ಅದರ ಪ್ರಕ್ರಿಯೆಯಿನ್ನೂ ಮುಂದುವರೆದಿದೆ.ಓರ್ವ ಸಾಮಾನ್ಯ ನಾಗರೀಕರಾಗಿ ಅವರಿಗೆ ಸ್ಪಂದಿಸಿದ್ದೇವೆ. 1984ರಲ್ಲೂ ಚೆನ್ನೈ, ಬೆಂಗಳೂರು ಮತ್ತು ನಮ್ಮ ಫಾರ್ಮ್ ಹೌಸ್‍ನಲ್ಲಿ ದಾಳಿ ನಡೆದಿತ್ತು.

ಇಂದು ನಟಸಾರ್ವಭೌಮ ಆಡಿಯೋ ಲಾಂಚ್ ಕಾರ್ಯಕ್ರಮವಿದ್ದು ಅಲ್ಲಿಗೆ ತೆರಳಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಹಾಗಾಗಿ ಇಂದು ಸಂಜೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಹೇಳಿದರು.

ಯಶ್ ನಿವಾಸದಲ್ಲಿ 3ನೇ ದಿನವೂ ದಾಳಿ:
ಇನ್ನು ಯಶ್ ಮನೆಯಲ್ಲಿ 3ನೇ ದಿನವೂ ದಾಳಿ ಮುಂದುವರೆದಿದ್ದು ಅಧಿಕಾರಿಗಳು ಮತ್ತೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಹೊಸಕೆರೆ ಮನೆಯಲ್ಲಿ ನಿನ್ನೆ ತಡರಾತ್ರಿಯವರೆಗೂ ಪರಿಶೀಲನೆ ನಡೆಸಿದ್ದ ಐಟಿ ಅಧಿಕಾರಿಗಳು, ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಯಶ್ ಮಾವ, ಮ್ಯಾನೇಜರ್, ಯಶ್ ತಾಯಿ ಅವರ ಮನೆಯಲ್ಲಿ ಕಡತಗಳ ಪರಿಶೀಲನೆ ಹಾಗೂ ಹೇಳಿಕೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಸೀಮಂತದಲ್ಲಿ ಬಂದ ಉಡುಗೊರೆಗಳ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಹಾಗೆಯೇ ರಾಕ್ ಲೈನ್ ವೆಂಕಟೇಶ್ ಮನೆಯಲ್ಲೂ ಕಳೆದೆರಡು ದಿನಗಳಿಂದ ದಾಳಿ ಮುಂದುವರೆದಿದ್ದು, ಇಂದು ಕೂಡ ಐಟಿ ಅಧಿಕಾರಿಗಳು ಮುಂಜಾನೆ ಭೇಟಿ ಕೊಟ್ಟು ದಾಳಿಯನ್ನು ಮುಂದುವರೆಸಿದ್ದಾರೆ. ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಅಂತೆಯೇ ನಿರ್ಮಾಪಕರಾದ ವಿಜಯಕಿರಗಂದೂರು, ಜಯಣ್ಣ ನಿವಾಸದಲ್ಲೂ ದಾಳಿ ಮುಂದುವರೆದಿದ್ದು ಇಂದು ಬಹುತೇಕ ಅಂತ್ಯಗೊಳ್ಳಲಿದೆ.
ಕಡತಗಳು, ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿರುವ ಐಟಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ