ಅಂಬಿಕಾತನಯದತ್ತ ಪ್ರಧಾನ ವೇದಿಕೆ, ಧಾರವಾಡ, ಜ.4- ಈಗ ಕನ್ನಡಕ್ಕೆ ನೆರವಾಗಬಲ್ಲ ಪ್ರಮುಖ ವ್ಯಕ್ತಿ-ಶಕ್ತಿ ಎಂದರೆ ಶಿಕ್ಷಕ ಮಾತ್ರ ಎಂದು ವ್ಯಾಖ್ಯಾನಿಸಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರರು, ಹಂಗಾಮಿ ಶಿಕ್ಷಕರನ್ನು ಈ ಕೂಡಲೇ ಖಾಯಂಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಧಾರಾವಾಡ ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಮಹಾಕವಿ ಪಂಪ ಮಹಾಮಂಟಪದ ಅಂಬಿಕಾತನಯದತ್ತ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರಾಗಿ ಭಾಷಣ ಮಾಡಿದ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕøತ ಸಾಹಿತಿ ಡಾ.ಕಂಬಾರರು ಶಿಕ್ಷಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಯಾವ ಸರ್ಕಾರಕ್ಕೂ ಶೋಭೆ ತರುವುದಿಲ್ಲ ಎಂದರು.
ಸುದೈವದಿಂದ ಈ ಕಾಲದಲ್ಲೂ ಕೂಡ ನಮ್ಮ ದೇಶದ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧ ಹಾರ್ದಿಕವಾಗಿದೆ. ವಿದ್ಯಾರ್ಥಿಗಳು ಶಿಕ್ಷಕರ ಮೇಲಿನ ನಂಬಿಕೆಯನ್ನು ಇನ್ನೂ ಕಳೆದುಕೊಂಡಿಲ್ಲ ಎಂದು ಸಮ್ಮೇಳನಾಧ್ಯಕ್ಷರು ಮೆಚ್ಚುಗೆಯ ಮಾತುಗಳನ್ನಾಡಿದರು.
ಕನ್ನಡಕ್ಕೆ ಶಕ್ತಿ ತುಂಬಲು ನಮ್ಮ ಶಿಕ್ಷಕರೆಲ್ಲರೂ ಒಟ್ಟಾಗಿ ವಿಜ್ಞಾನ ಪುಸ್ತಕ ಯಾವುದೇ ಭಾಷೆಯಲ್ಲಿ ಇರಲಿ ಅದನ್ನು ಕನ್ನಡದಲ್ಲಿ ಕಲಿಸುವ ಸಂಕಲ್ಪಕ್ಕೆ ಬದ್ಧರಾಗಬೇಕು, ನಮ್ಮ ಶಿಕ್ಷಕರು ಬೇರೆ ಭಾಷೆಗಳನ್ನು ಕಲಿತು ಅಲ್ಲಿ ದೊರೆತಿದ್ದನ್ನು ಕನ್ನಡದಲ್ಲಿ ತಿಳಿಸುವ ಸಾಮಥ್ರ್ಯ ಪಡೆಯಬೇಕು ಎಂದು ಅವರು ಶಿಕ್ಷಕ ಸಮುದಾಯಕ್ಕೆ ಕರೆ ನೀಡಿದರು.
ಸಾಹಿತ್ಯವೊಂದರಲ್ಲಿ ಮಾತ್ರ ಭಾಷೆಯ ಸೃಜನಶೀಲವಾದ ಉಪಯೋಗವಾಗುತ್ತದೆ ಎಂಬ ತಪ್ಪು ಗ್ರಹಿಕೆ ನಮ್ಮಿಂದ ದೂರವಾಗಬೇಕು.ಶಿಕ್ಷಣ ಕೂಡ ಒಂದು ಸೃಜನಶೀಲ ಪ್ರಕ್ರಿಯೆ.ಇದು ಶಿಕ್ಷಕ ಮತ್ತು ವಿದ್ಯಾರ್ಥಿ ನಡುವಣ ಸಂಬಂಧ.ಶಿಕ್ಷಣವು ಶಾಸ್ತ್ರಕ್ಕಿಂತ ಹೆಚ್ಚಾಗಿ ಒಂದು ಕಲೆ. ಶಿಕ್ಷಕ ನಟನಂತೆ ಒಬ್ಬ ಕಲಾವಿದೆ.ಶಿಕ್ಷಕ ಭಾಷೆಯನ್ನು ಸೃಜನಶೀಲವಾಗಿ ಉಪಯೋಗಿಸುತ್ತಾನೆ. ಅವನ ಭಾಷೆ ವಿದ್ಯೆಯನ್ನು ಸೃಷ್ಟಿಸುತ್ತದೆ.
ಕನ್ನಡವೇ ಶಿಕ್ಷಣ ಮಾಧ್ಯಮ ಆಗಬೇಕು.ಶಿಕ್ಷಕನೊಬ್ಬನ ಸಂಕಲ್ಪದಿಂದ ಮಾತ್ರ ಇದು ಬದಲಾಗುವುದಿಲ್ಲ. ಇದು ರಾಜ್ಯ ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿಯೂ ಆಗಿದೆ.ಈ ನಿಟ್ಟಿನಲ್ಲಿ ಸರ್ಕಾರವು ಮನಸ್ಸು ಮಾಡಬೇಕು.ಜನತೆಯೂ ಕೂಡ ಇದನ್ನೇ ಬಯಸಬೇಕು. ಶಿಕ್ಷಕ, ಸರ್ಕಾರ ಮತ್ತು ಜನರು- ಈ ಮೂರು ಸೇರಿದಾಗಲೇ ಕನ್ನಡ ಮಾಧ್ಯಮ ಸುಲಭ ಸಾಧ್ಯ ಎಂದು ಅವರು ಒತ್ತಿ ಹೇಳಿದರು.