ಪ್ರತ್ಯೇಕ ಉತ್ತರ ಕರ್ನಾಟಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಾ.ಚಂದ್ರಶೇಖರ ಕಂಬಾರ

ಧಾರವಾಡ, ಜ.4- ಕರ್ನಾಟಕದ ಕೆಲವೆಡೆ ಮತ್ತೆ ಪ್ರತ್ಯೇಕತೆಯ ಕೂಗು ಪ್ರತಿಧ್ವನಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಇಂಥ ಸೊಲ್ಲೆತ್ತುವವರ ವಿರುದ್ಧ ಗುಡುಗಿದ್ದಾರೆ.

ಧಾರಾವಾಡ ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಮಹಾಕವಿ ಪಂಪ ಮಹಾಮಂಟಪದ ಅಂಬಿಕಾತನಯದತ್ತ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರಾಗಿ ಭಾಷಣ ಮಾಡಿದ ಡಾ.ಕಂಬಾರ.ಒಂದಾಗಿರುವುದನ್ನು ಯಾವುದೇ ಕಾರಣಕ್ಕೂ ಎರಡು ಮಾಡುವುದು ಬೇಡ ಎಂದು ಮನವಿ ಮಾಡಿದರು.

ಏಕೀಕರಣದಿಂದ ಪ್ರತ್ಯೇಕೀಕರಣದ ಕಿರುದನಿಯತ್ತ ವಾಲುತ್ತಿರುವ ಸನ್ನಿವೇಶದ ಬಗ್ಗೆ ಬೇಸರದಿಂದ ನುಡಿದ ಅವರು ಪ್ರತ್ಯೇಕತೆಯೊಂದೇ ಇದಕ್ಕೆ ಪರಿಹಾರವಲ್ಲ. ಒಂದು ರಾಜ್ಯದ ಅಭಿವೃದ್ಧಿಯ ಆಶಯವನ್ನು ಇದು ಖಂಡಿತ ಈಡೇರಿಸುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಒಂದು ಕುಟುಂಬದ ಜೀವನಕ್ಕಾಗಿ ನಿರ್ಮಿತವಾದ ಮನೆಗೆ ಗೋಡೆಗಳಿರುತ್ತವೆ. ಎರಡೂ ಬಾಗಿಲುಗಳೂ ಇರುತ್ತವೆ. ಗೋಡೆಗಳು ನಮ್ಮನ್ನು ಪ್ರಪಂಚದಿಂದ ಬೇರ್ಪಡಿಸುತ್ತವೆ ಮತ್ತು ಕಾಪಾಡುತ್ತವೆ. ಬಾಗಿಲುಗಳು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಅನುಕೂಲ ಕಲ್ಪಿಸುತ್ತವೆ. ಈಗಿನ ನಮ್ಮ ಮನೆಯ ಗೋಡೆ ಒಡೆದು ಇರುವ ಬಾಗಿಲುಗಳಿಗೆ ಇನ್ನಷ್ಟು ಬಾಗಿಲುಗಳನ್ನು ನಿರ್ಮಿಸಿ ಬಯಲನ್ನಾಗಿ ಮಾಡುವುದು ಬೇಡ ಎಂದು ಅವರು ಪ್ರತ್ಯೇಕತೆ ಸೊಲ್ಲೆತ್ತುತ್ತಿರುವವರಲ್ಲಿ ಪ್ರಾರ್ಥಿಸಿದರು.

ಎರಡು ಕರ್ನಾಟಕ ಬೇಕೆನ್ನುವ ಮಹಾನುಭಾವರಿದ್ದಾರೆ.ಒಂದೇ ಜಿಲ್ಲೆಯನ್ನು ಎರಡಾಗಿ ಒಡೆಯಬೇಕೆನ್ನುವವರೂ ಇದ್ದಾರೆ ಎಂದು ಕರ್ನಾಟಕ ಏಕೀಕರಣವಾಗುವುದಕ್ಕೆ ಕಾರಣರಾದ ಮಹನೀಯರ ಶ್ರಮವನ್ನು ಸ್ಮರಿಸಿದ ಡಾ.ಕಂಬಾರರು, ಒಂದು ಜಿಲ್ಲೆಯನ್ನು ಎರಡು ಮಾಡಿ ಇಡೀ ಜಿಲ್ಲೆಯನ್ನು ಕಳೆದುಕೊಳ್ಳದಿರೋಣ ಎಂದು ಅಖಂಡ ಕರ್ನಾಟಕ ಅಚಲತೆಯನ್ನು ಪ್ರತಿಪಾದಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ