ಬೆಂಗಳೂರು, ಜ.3-ಸಾರ್ವಜನಿಕರ ಹಣವನ್ನು ಲಪಟಾಯಿಸಿ ವಿದೇಶಕ್ಕೆ ಹಾರಿಹೋಗುವಂಥವರಿಗೆ ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ವಿಜಯಬ್ಯಾಂಕನ್ನು ನಷ್ಟದಲ್ಲಿರುವ ಬ್ಯಾಂಕ್‍ಗಳ ಜತೆ ಕೇಂದ್ರ ಸರ್ಕಾರ ವಿಲೀನ ಮಾಡಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾ, ದೇನಾಬ್ಯಾಂಕ್‍ನೊಂದಿಗೆ ವಿಲೀನಗೊಳಿಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, 1931ರಲ್ಲಿ ವಿಜಯಾಬ್ಯಾಂಕ್ ಆರಂಭವಾಯಿತು. ಅಂದಿನಿಂದಲೂ ಗ್ರಾಮೀಣ ಭಾಗಗಳು ಸೇರಿದಂತೆ ನಗರ ಪ್ರದೇಶದಲ್ಲೂ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ 2700 ಶಾಖೆಗಳನ್ನು ಹೊಂದಿದೆ ಎಂದರು.
ಬ್ಯಾಂಕ್ ಆರಂಭವಾದಾಗಿನಿಂದಲೂ ಕೃಷಿಕರಿಗೆ ನೆರವು ನೀಡುತ್ತಾ ಬಂದಿರುವ ವಿಜಯಾಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡ ಮತ್ತು ದೇನಾ ಬ್ಯಾಂಕ್‍ನೊಂದಿಗೆ ವಿಲೀನ ಮಾಡಲು ತಪ್ಪು ನಿರ್ಧಾರ ಮಾಡಲಾಗಿದೆ. ಏಕಾಏಕಿ ಸಂಪುಟದಲ್ಲಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಸಂಸತ್‍ನಲ್ಲಿ ಈ ಬಗ್ಗೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನಿರ್ಧಾರದ ವಿರುದ್ಧ ನಮ್ಮ ಸಂಸದರು ವಿರೋಧಿಸಿ ಪ್ರತಿಭಟನೆ ನಡೆಸಬೇಕು. ಬ್ಯಾಂಕ್‍ಗಳನ್ನು ವಿಲೀನಗೊಳಿಸದಂತೆ ಒತ್ತಾಯ ಹೇರಬೇಕು. ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ತರುವಲ್ಲಿ ವಿಫಲರಾದರೆ ಸಂಸದರ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ವಿಜಯಾ ಬ್ಯಾಂಕ್ ವಿಲೀನಗೊಳಿಸದಂತೆ ಪಕ್ಷ ಭೇದ ಮರೆತು ಎಲ್ಲಾ ಸಂಸದರು ಕೇಂದ್ರದ ಮೇಲೆ ಒತ್ತಾಯ ತರಬೇಕಿದೆ. ಆರ್ಥಿಕವಾಗಿ ಲಾಭದಾಯಕವಾಗಿರುವ ವಿಜಯಾ ಬ್ಯಾಂಕನ್ನು 2016ರಿಂದ ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಮತ್ತು ದೇನಾ ಬ್ಯಾಂಕ್‍ನೊಂದಿಗೆ ವಿಲೀನಗೊಳಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿದರು.