2019ರ ರಾಷ್ಟ್ರೀಯ ಖಾದಿ ಉತ್ಸವಕ್ಕೆ ಚಾಲನೆ

ಬೆಂಗಳೂರು, ಜ.3- ರಾಜ್ಯದ ಖಾದಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಆಯೋಜಿಸಿರುವ 2019ರ ರಾಷ್ಟ್ರೀಯ ಖಾದಿ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಖಾದಿ ಉತ್ಸವದ ವೇಳೆಗೆ ಖಾದಿ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಶಾಲಾ ಮಕ್ಕಳ ಸಮವಸ್ತ್ರವಕ್ಕೆ ಖಾದಿ ವಸ್ತ್ರ ಬಳಸುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು. ಗುಡಿ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ಪೆÇ್ರೀ ಉದ್ದೇಶದಿಂದ ಸಹಾಯ ಧನವನ್ನು ನೀಡುತ್ತಿದೆ ಎಂದು ಹೇಳಿದರು.

ತಮಿಳುನಾಡು ಮತ್ತು ಕೇರಳದಲ್ಲಿ ತೆಂಗಿನ ನಾರಿನ ಉದ್ದಿಮೆಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಿದೇಶಗಳಿಗೆ ರಫ್ತು ಮಾಡಿ ಆದಾಯ ಗಳಿಸುತ್ತಿವೆ. ಆದರೆ, ರಾಜ್ಯದಲ್ಲಿ ತೆಂಗಿನ ನಾರಿನ ಉತ್ಪನ್ನಗಳ ರಫ್ತು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತೆಂಗು ಬೆಳೆಯುವ 14 ಜಿಲ್ಲೆಗಳಲ್ಲಿ ತೆಂಗಿನ ನಾರಿನ ಉತ್ಪಾದನಾ ಘಟಕಗಳನ್ನು ತೆರೆಯಲಾಗುವುದು. ಆ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಸದ್ಯದಲ್ಲೇ ಖಾಯಂ ನೀತಿಯನ್ನು ಜಾರಿಗೆ ತರಲಾಗುವುದು. ಜ.8ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ವಿವಿಧ 16 ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸಣ್ಣ ಉದ್ದಿಮೆಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ತಯಾರಿಸುವ ಉತ್ಪನ್ನಗಳು ದೇಶೀಯ ವಸ್ತುಗಳೇ ಹೊರತು, ವಿದೇಶಿಗರು ಭಾರತದಲ್ಲಿ ಬಂಡವಾಳ ಹೂಡಿ ಉತ್ಪಾದಿಸಿದಂತಹ ವಸ್ತುಗಳು ಸ್ವದೇಶಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಅಡಿಯಲ್ಲಿ ತಯಾರಿಸುವ ವಸ್ತುಗಳು ಕೂಡ ಸ್ವದೇಶಿ ಆಗುವುದಿಲ್ಲ ಎಂದ ಅವರು, ಮಾಲ್‍ಗಳಿಂದಾಗಿ ದೇಶೀಯ ಸಣ್ಣಪುಟ್ಟ ವ್ಯಾಪಾರಸ್ಥರು ಬೀದಿಪಾಲಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಗತಿ ಮತ್ತು ಅಭಿವೃದ್ಧಿ ಹೆಸರಿನಲ್ಲಿ ವ್ಯವಸ್ಥೆಯನ್ನೇ ಹಾಳು ಮಾಡಲಾಗಿದೆ. ತಮಿಳಿನಾಡಿನಲ್ಲಿ ಎಲ್ಲಾ ರಾಜಕಾರಣಿಗಳು ಖಾದಿ ವಸ್ತುಗಳನ್ನು ಬಳಸುತ್ತಾರೆ. ನಮ್ಮ ಶಾಸಕರು ಖಾದಿ ತೊಡುವಂತಹ ಸಂಕಲ್ಪ ಮಾಡಬೇಕೆಂದು ಕರೆ ಕೊಟ್ಟರು.

ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಆಯುಕ್ತರಾದ ಗುಂಜನ್ ಕೃಷ್ಣ, ಖಾದಿ ಮತ್ತು ಗ್ರಾಮೋದ್ಯೋಗ ಮಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಂತೇಶ್ ನಿ ಕರೂರ, ಕೆನರಾ ಬ್ಯಾಂಕ್‍ನ ಜನರಲ್ ಮ್ಯಾನೇಜರ್ ರಾಮಚಂದ್ರ ಹಾಗೂ ಬಿಬಿಎಂಪಿ ಸದಸ್ಯೆ ಆರ್.ಜೆ.ಲತಾ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ