ಲೋಕಸಭೆ ಚುನಾವಣೆ: ಹೊಸ ಮುಖಗಳಿಗೆ ಬಿಜೆಪಿ ಮಣೆ

ಬೆಂಗಳೂರು, ಜ.3- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಲಿ ಯಾವುದೇ ಶಾಸಕರಿಗೆ ಟಿಕೆಟ್ ನೀಡದೆ ಹಾಲಿ ಸಂಸದರು ಮತ್ತು ಹೊಸ ಮುಖಗಳಿಗೆ ಮಣೆ ಹಾಕಲು ಬಿಜೆಪಿ ಮುಂದಾಗಿದೆ.

ಕಳೆದ ಎರಡು ವಾರಗಳಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಜಿಲ್ಲಾವಾರು ಸಭೆಗಳನ್ನು ನಡೆಸುತ್ತಿದ್ದು, ಲೋಕಸಭಾ ಭರ್ಜರಿ ಸಿದ್ದತೆಗಳನ್ನು ಆರಂಭಿಸಿದ್ದಾರೆ.

ಈ ಬಾರಿ ಗೆಲ್ಲುವ ಕುದುರೆಗಳನ್ನೇ ಮಾನದಂಡವಾಗಿಟ್ಟು ಕೊಂಡಿರುವ ಬಿಜೆಪಿ, ಹಾಲಿ ಶಾಸಕರಿಗೆ ಟಿಕೆಟ್ ಕೊಡದಿರಲು ತೀರ್ಮಾನಿಸಿದೆ. ರಾಜ್ಯ ರಾಜಕಾರಣದಲ್ಲಿ ಯಾವುದೇ ರೀತಿಯ ಕ್ಷಿಪ್ರ ಬೆಳವಣಿಗೆಗಳು ನಡೆಯಬಹುದೆಂಬ ದೂರದೃಷ್ಟಿ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಕಳೆದ ವಾರ ಬಳ್ಳಾರಿ, ರಾಯಚೂರು, ಚಿಕ್ಕೋಡಿ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಮುಖಂಡರ ಸಭೆ ನಡೆಸಲಾಯಿತು. ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು.

ಹೀಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಕೂಡ್ಲಗಿ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

ರಾಯಚೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಶಾಸಕ ಶಿವನಗೌಡ ನಾಯಕ್, ಚಿಕ್ಕೋಡಿಯಿಂದ ಉಮೇಶ್ ಕತ್ತಿ ಸೇರಿದಂತೆ ಹಾಲಿ ಶಾಸಕರನ್ನೇ ಲೋಕಸಭಾ ಸಮರಕ್ಕೆ ಅಭ್ಯರ್ಥಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.

ಆದರೆ ಹಾಲಿ ಶಾಸಕರಿಗೆ ಟಿಕೆಟ್ ನೀಡದಿರುವುದಕ್ಕೆ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ನಾವು 104 ಶಾಸಕರನ್ನು ಹೊಂದಿದ್ದೇವೆ. ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಯಾವುದೇ ಸಂದರ್ಭದಲ್ಲೂ ಅಸ್ಥಿರಗೊಳ್ಳಬಹುದು. ಶಾಸಕರಿಗೆ ಟಿಕೆಟ್ ನೀಡಿ ಗೆದ್ದರೆ ಪುನಃ ಉಪಚುನಾವಣೆ ನಡೆಯಬೇಕು.

ಉಪಚುನಾವಣೆಯಲ್ಲಿ ಆಡಳಿತದ ಯಂತ್ರ ಸರ್ಕಾರದ ಕೈಯಲ್ಲಿರುತ್ತದೆ. ಅಲ್ಲದೆ ಮತದಾರರು ಕೂಡ ಆಡಳಿತ ಪಕ್ಷಕ್ಕೇ ಮತ ಹಾಕುವುದು ರೂಢಿಗತ. ಇಂತಹ ಸಂದರ್ಭದಲ್ಲಿ ಅನಗತ್ಯ ಗೊಂದಲ ಬೇಡವೇ ಬೇಡ ಎಂದು ಕಡ್ಡಿ ಮುರಿದಂತೆ ವರಿಷ್ಠರಿಗೆ ಹೇಳಿದ್ದಾರೆ.

ರಾಯಚೂರಿನಿಂದ ಹಾಲಿ ಕಾಂಗ್ರೆಸ್ ಸಂಸದ ಬಿ.ವಿ.ನಾಯಕ್ ಬಿಜೆಪಿಗೆ ಬರುವ ಸಂಭವವಿದೆ. ಅಲ್ಲದೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್ ಕೆಲವೇ ಕೆಲವು ಮತಗಳ ಅಂತರದಿಂದ ಸೋತಿದ್ದರು.

ಜಿಲ್ಲೆಯಲ್ಲಿ ಪಕ್ಷದ ಪರ ಉತ್ತಮವಾದ ವಾತಾವರಣವಿದೆ. ಬಳ್ಳಾರಿ ಉಪಚುನಾವಣೆಯಲ್ಲಿ ನಾವು ರಾಮುಲುಗೆ ಜವಾಬ್ದಾರಿ ವಹಿಸಿದ್ದೇ ನಮ್ಮ ಲೆಕ್ಕಾಚಾರ ತಪ್ಪಾಯಿತು. ಮತದಾನ ಸಂದರ್ಭದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಸಿದ್ದರಾಮಯ್ಯನವರ ಮಗನ ಕುರಿತು ಆಡಿದ ಮಾತು ಮುಳುವಾಯಿತು.

ಅನಿವಾರ್ಯ ಕಾರಣಗಳಲ್ಲಿ ಉಗ್ರಪ್ಪ ಗೆದ್ದಿರಬಹುದು. ಮುಂದಿನ ಚುನಾವಣೆಯಲ್ಲಿ ಎನ್.ವೈ.ಗೋಪಾಲಕೃಷ್ಣ ಅವರ ಸಹೋದರ ಎನ್.ವೈ.ಹನುಮಂತಪ್ಪನವರ ಕುಟುಂಬಕ್ಕೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆದಿದೆ.

ಚಿಕ್ಕೋಡಿಯಲ್ಲಿ ಕಳೆದ ಬಾರಿ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಕೂದಲೆಳೆ ಅಂತರದಿಂದ ಪರಾಭವಗೊಂಡಿದ್ದರು. ಈಗಾಗಲೇ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದಾರೆ. ಜಿಲ್ಲೆಯಲ್ಲೂ ಪಕ್ಷಕ್ಕೆ ಉತ್ತಮವಾದ ವಾತಾವರಣವಿದೆ.

ರಮೇಶ್ ಕತ್ತಿಯನ್ನೇ ಅಭ್ಯರ್ಥಿ ಮಾಡಬೇಕೆಂಬ ಒತ್ತಡ ಹೆಚ್ಚಾಗಿದೆ.
ಹೀಗೆ ಹಲವು ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡಲು ಪಕ್ಷ ತೀರ್ಮಾನಿಸಿದ್ದು, ಒಂದೆರಡು ಕ್ಷೇತ್ರಗಳಲ್ಲಿ ಮಾತ್ರ ಸಣ್ಣಪುಟ್ಟ ವ್ಯತ್ಯಾಸವಾಗುವ ಸಾಧ್ಯತೆ ಇದೆ.

ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸಲು ಶೋಭಾ ಕರಂದ್ಲಾಜೆ ಹಿಂದೇಟು ಹಾಕಿದರೆ ಮಾಜಿ ಸಚಿವ ಜಯಪ್ರಕಾಶ್ ಹೆಗಡೆ ಈ ಕ್ಷೇತ್ರದಿಂದ ಕಣಕ್ಕಿಳಿಯುವುದು ಖಚಿತ.

ತುಮಕೂರಿನಲ್ಲಿ ಮಾಜಿ ಸಚಿವ ಜಿ.ಎಚ್.ಬಸವರಾಜ್ ಅವರಿಗೆ ಟಿಕೆಟ್ ನೀಡಬಾರದೆಂದು ಜಿಲ್ಲೆಯಲ್ಲಿನ ಒಂದು ಬಣ ಬಿಎಸ್‍ವೈಗೆ ಮನವಿ ಮಾಡಿದೆ. ಆದರೆ ಯಡಿಯೂರಪ್ಪ ಕೃಪಾಕಟಾಕ್ಷ ಇರುವ ಕಾರಣ ಕೊನೆ ಕ್ಷಣದಲ್ಲಿ ಬಸವರಾಜ್ ಅವರೇ ಅಭ್ಯರ್ಥಿಯಾದರೂ ಅಚ್ಚರಿ ಇಲ್ಲ.

ನೀವು ಹೇಳಿದವರನ್ನೇ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಲಾಗುವುದು. ನಮಗೆ ಕರ್ನಾಟಕದಿಂದ ಹೆಚ್ಚಿನ ಸ್ಥಾನಗಳು ಗೆಲ್ಲಬೇಕೆಂದು ಕೇಂದ್ರ ವರಿಷ್ಠರು ಸೂಚನೆ ಕೊಟ್ಟಿದ್ದಾರೆ.

ಹೀಗಾಗಿ ಯಡಿಯೂರಪ್ಪ ಹಾಲಿ ಯಾವುದೇ ಶಾಸಕರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡದೆ ಅನ್ಯ ಪಕ್ಷಗಳ ಪ್ರಭಾವಿಗಳಿಗೆ ಗಾಳ ಹಾಕುವಲ್ಲಿ ಮಗ್ನರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ