ನೀರಿನ ಶುದ್ದೀಕರಣ ಘಟಕ ಸ್ಥಾಪನೆಯ ಟೆಂಡರ್‍ನಲ್ಲಿ ಗೋಲ್‍ಮಾಲ್ ನಡೆದಿದ್ದರೆ ಸೂಕ್ತ ಕ್ರಮ

ಬೆಂಗಳೂರು,ಜ.3-ಕುಡಿಯುವ ನೀರಿನ ಶುದ್ದೀಕರಣ ಘಟಕ ಸ್ಥಾಪನೆಯ ಟೆಂಡರ್‍ನಲ್ಲಿ ಗೋಲ್‍ಮಾಲ್ ನಡೆದಿದ್ದರೆ, ಆ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೌರಾಡಳಿತ ಸಚಿವ ಶಿವಳ್ಳಿ ಹೇಳಿದ್ದಾರೆ.

ವಿಧಾನಸೌಧದ 2ನೇ ಮಹಡಿಯ ಕೊಠಡಿ ಸಂಖ್ಯೆ 237ರ ನೂತನ ಕಚೇರಿಗೆ ಪೂಜೆ ಸಲ್ಲಿಸಿ ಕಾರ್ಯಾರಂಭ ಮಾಡಿ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ರಾಜ್ಯದಲ್ಲಿ 58 ನಗರಸಭೆ, 113 ಪುರಸಭೆ,90 ಪಪಂ ಪೌರಾಡಳಿತ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಕೆಲಸ ಮಾಡಲು ಇದು ಅತ್ಯಂತ ಒಳ್ಳೆಯ ಇಲಾಖೆ. ಕೆಲಸ ಮಾಡಬೇಕು. ನಾನು ಹೊಸದಾಗಿ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನಿನ್ನೆಯಷ್ಟೇ ಪೂರ್ವಭಾವಿಯಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ.
ಜ.10ರಂದು ಇಲಾಖೆಯ ಎಲ್ಲ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಂಕ್ರಾಂತಿ ಬಳಿಕ ರಾಜ್ಯಾದ್ಯಂತ ಪ್ರವಾಸ ಆರಂಭಿಸುತ್ತೇನೆ. ನಾಲ್ಕು ಕಂದಾಯ ವಿಭಾಗಗಳಲ್ಲೂ ಸಭೆ ನಡೆಸುತ್ತೇನೆ ಎಂದು ಹೇಳಿದರು.

ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ ಶೌಚಾಲಯ ನಿರ್ಮಾಣ ನಮ್ಮ ಮುಂದಿರುವ ಸವಾಲುಗಳು. ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಯೋಜನೆ ಅತ್ಯುತ್ತಮವಾದ ಕೆಲಸ ಯಾವ ಭಾಗದಲ್ಲೂ ಘಟಕಗಳು ಸ್ಥಗಿತಗೊಳ್ಳಬಾರದು. ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಹಿಂದೆ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್‍ಮಾಲ್ ನಡೆದಿದೆ ಎಂಬ ಆರೋಪಗಳಿವೆ. ಅವುಗಳ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಮಹದಾಯಿ ನದಿಗೆ ಕಳಸಾಬಂಡೂರಿ ಬಳಿ ಅಣೆಕಟ್ಟು ನಿರ್ಮಾಣಕ್ಕೆ ಹಾಗೂ ಆ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ಸುಪ್ರೀಂಕೊರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಕೇಂದ್ರ ಸರ್ಕಾರ ಕೂಡಲೇ ತೀರ್ಪಿನ ಬಗ್ಗೆ ಅಧಿಸೂಚನೆ ಹೊರಡಿಸಿ ಹುಬ್ಬಳ್ಳಿ-ಧಾರವಾಡ ಭಾಗದ ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕು.

ಅನಗತ್ಯವಾಗಿ ವಿಳಂಬವಾಗುತ್ತಿರುವುದು ಕಂಡುಬಂದರೆ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು. ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಲು ಪರಿಣಿತರ ಸಲಹೆ ಪಡೆಯಲಾಗುವುದು. ಫೆ.8ರಂದು ಬಜೆಟ್ ಅಧಿವೇಶನಕ್ಕೆ ಪೂರ್ವಭಾವಿ ತಯಾರಿ ನಡೆಸಲಾಗಿದೆ. ಅಲ್ಲಿ ಸಲ್ಲಿಸಬೇಕಾದ ಪ್ರಸ್ತಾವನೆಗಳ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದರು.

ರಾಜೀನಾಮೆ ಯಾವ ಕಾರಣಕ್ಕೆ:
ಪ್ರಸ್ತುತ ರಾಜಕೀಯ ಬೆಳವಣಿಗಳಿಂದ ಸರ್ಕಾರ ಪತನ ಗೊಳ್ಳುತ್ತದೆ ಎಂಬುದು ಊಹಾಪೋಹ. ಯಾರೂ ರಾಜೀನಾಮೆ ಕೊಡುವುದಿಲ್ಲ ಎಂದು ಸಚಿವ ಶಿವಳ್ಳಿ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ವೋಟು ಹಾಕಿದ ಮತದಾರ ಪ್ರಭು 5 ವರ್ಷ ಕೆಲಸ ಮಾಡಲು ಆದೇಶ ಕೊಟ್ಟಿದ್ದಾನೆ. ಈ ಮಧ್ಯೆ ಏಕಾಏಕಿ ರಾಜೀನಾಮೆ ಕೊಡುವುದಾದರೆ ಯಾವ ಕಾರಣಕ್ಕೆ ಎಂದು ವಿವರಣೆ ನೀಡಬೇಕಲ್ಲವೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷಗಳು ಬಹುಮತ ಹೊಂದಿವೆ. ಸಹಜವಾಗಿ ಸರ್ಕಾರ ರಚಿಸಿವೆ. ಶಾಸಕರು ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನ ಹೊಂದಿದ್ದಾರೆ. ಆದರೆ ಲೋಕಸಭೆ ಚುನಾವಣೆ ನಂತರ ಅವರಿಗೆ ನ್ಯಾಯ ಸಿಗುವ ಸಾಧ್ಯತೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

ಈಗ ಏಕಾಏಕಿ ರಾಜೀನಾಮೆ ನೀಡಿದರೆ ಯಾವ ಕಾರಣಕ್ಕೆ ಎಂದು ಜನರಿಗೆ ಸ್ಪಷ್ಟಪಡಿಸಬೇಕು. ಪದೇಪದೇ ಚುನಾವಣೆ ನಡೆಸುವುದು ಹುಡುಗಾಟಿಕೆ ವಿಷಯವಲ್ಲ. ಬಹಳಷ್ಟು ಮಂದಿ ರಾಜೀನಾಮೆ ಕೊಟ್ಟ ನಂತರ ಗೆಲ್ಲುವ ವಿಶ್ವಾಸವಿಲ್ಲ ಎಂದ ಅವರು, ಯಾರು ಏನೇ ಪ್ರಯತ್ನಪಟ್ಟರೂ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುವುದಿಲ್ಲ. ಸರ್ಕಾರ ಪತನವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾವು ಸಚಿವ ಸ್ಥಾನಕ್ಕೆ ಯಾವುದೇ ಲಾಭಿ ಮಾಡಿಲ್ಲ. ವರಿಷ್ಠರು ತಮ್ಮ ಪಕ್ಷ ನಿಷ್ಠೆ ಗುರುತಿಸಿ ಅವಕಾಶ ನೀಡಿದ್ದಾರೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ