ಧಾರವಾಡ: ಕನ್ನಡ ಸಾಹಿತ್ಯ ಸಮ್ಮೇಳನಗಳು ಸಮಸ್ತ ಕನ್ನಡಿಗರ ಹೆಮ್ಮೆಯ ನುಡಿ ಜಾತ್ರೆಗಳಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆಯಾಯಿತು. ಅಂದಿನಿಂದಲೂ ದೊಡ್ಡ ಪ್ರಮಾಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಕೊಂಡು ಬರಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 83 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ.
ನಮ್ಮ ಧಾರವಾಡ ಜಿಲ್ಲೆಯಲ್ಲಿ 5 ಸಮ್ಮೇಳನಗಳು ನಡೆದಿವೆ. ಧಾರವಾಡದಲ್ಲಿ 61 ವರ್ಷಗಳ ನಂತರ ಜರುಗುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ, ಹೊರರಾಜ್ಯ, ಸೇರಿದಂತೆ ರಾಷ್ಟ್ರದ ವಿವಿಧ ಸ್ಥಳಗಳಿಂದ ಲಕ್ಷಾಂತರ ಜನ ಸಾಹಿತಿಗಳು, ಸಾಹಿತ್ಯಾಸಕ್ತರು ಆಗಮಿಸುತ್ತಿದ್ದಾರೆ.
ಧಾರವಾಡದಲ್ಲಿ ಮೊದಲ ಬಾರಿಗೆ 1918ರ ಮೇ 11, 12, 13 ರಂದು 4ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರ್.ನರಸಿಂಹಚಾರ್ ಅಧ್ಯಕ್ಷತೆಯಲ್ಲಿ ಜರುಗಿತ್ತು. ನಂತರ 1933ರ ಡಿ.29, 30 ಹಾಗೂ 31 ರಂದು 19ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹುಬ್ಬಳ್ಳಿಯಲ್ಲಿ ವೈ.ನಾಗೇಶ ಶಾಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತ್ತು.
ನಂತರ 1940ರ ಡಿ.27, 28 ಹಾಗೂ 29ರಂದು 25ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ವೈ. ಚಂದ್ರಶೇಖರ್ ಶಾಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲ್ಪಟ್ಟಿತ್ತು. 1957ರ ಮೇ 7, 8 ಹಾಗೂ 9 ರಂದು 39ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ಕುವೆಂಪು ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
1990ರ ಫೆಬ್ರವರಿ 16, 17 ಹಾಗೂ 18ರಂದು 59ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹುಬ್ಬಳ್ಳಿಯಲ್ಲಿ ಆರ್.ಸಿ.ಹಿರೇಮಠರ ಅಧ್ಯಕ್ಷತೆಯಲ್ಲಿ ಜರುಗಿತು. ಇದೀಗ 61 ವರ್ಷಗಳ ನಂತರ ಅಖಿಲ ಭಾರತ 84ನೆ ಕನ್ನಡ ಸಾಹಿತ್ಯ ಸಮ್ಮೇಳನವು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 4, 5, 6 ಜನವರಿ 2019ರಂದು ಮೂರು ದಿನಗಳ ಕಾಲ ನಡೆಯಲಿದೆ. ದೇಸಿ ಸೊಗಡಿನ ಕವಿ, ಕಾದಂಬರಿಕಾರ, ನಾಟಕಕಾರ, ಜಾ್ಞನಪೀಠ ಪ್ರಶಸ್ತಿ ಪುರಸ್ಕøತರಾದ ಡಾ. ಚಂದ್ರಶೇಖರ್ ಕಂಬಾರ ಸಮ್ಮೇಳನಾಧ್ಯಕ್ಷರಾಗಿ ದ್ದಾರೆ.
ವಿದ್ಯಾನಗರಿ ಧಾರವಾಡವನ್ನು ಸುಂದರ ವಾಗಿ ಅಲಂಕರಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜು ಹಾಗೂ ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ಎಲ್ಲಾ ಕಡೆಗೂ ಸಂಭ್ರಮ-ಸಡಗರ ತೋರುತ್ತಿದೆ. ಎಲ್ಲಾ ಕಚೇರಿ, ಕಟ್ಟಡಗಳ ಕಂಪೌಂಡ್‍ಗಳು ನಮ್ಮ ಕನ್ನಡ ನಾಡಿನ ಧ್ವಜ ಹೋಲುವ ಕೆಂಪು, ಹಳದಿ ಬಣ್ಣದಿಂದ ಗೋಡೆಗಳು ಶೃಂಗಾರಗೊಂಡಿವೆ.
ಎಲ್ಲೆಡೆ ಕನ್ನಡ ಧ್ವಜಗಳು ರಾರಾಜಿಸುತ್ತಿವೆ. ಕಲಾವಿದ ಬಿ.ಮಾರುತಿ ಹಾಗೂ ಪ್ರತಾಪ ಬಹುರೂಪಿ ಮತ್ತು ತಂಡದವರು ಜಾ್ಞನಪೀಠ ಪ್ರಶಸ್ತಿ ಪುರಸ್ಕøತರು, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿದ್ಯಾಲಯ ಗೋಪುರ, ಹಂಪಿಯ ಶಿಲ್ಪ ಕಲಾಕೃತಿಗಳ ಪ್ರತಿಬಿಂಬಗಳನ್ನು ಒಳಗೊಂಡ ವೇದಿಕೆಯ ಮುಖ್ಯ ಸಭಾಮಂಟಪ ನಿರ್ಮಾಣವಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯದ ಫುಟ್‍ಬಾಲ್ ಮೈದಾನದ ಪೆವಿಲಿಯನ್ ಕಟ್ಟಡದಲ್ಲಿ ಮಾಧ್ಯಮ ಕೇಂದ್ರ ನಿರ್ಮಿಸಲಾಗುತ್ತಿದೆ. ಸುಮಾರು 500 ಪುಸ್ತಕ ಮಳಿಗೆಗಳು 250 ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿದೆ.
84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ, ಅತಿಥಿಗಳಿಗೆ ಹಾಗೂ ನೋಂದಾಯಿತ ಸದಸ್ಯರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಸಮ್ಮೇಳನಕ್ಕೆ ಅನುಕೂಲವಾಗುವಂತೆ ವಿಆರ್‍ಎಲ್ ಸಂಸ್ಥೆಯಿಂದ 200 ಬಸ್ ಹಾಗೂ ಮಿನಿಬಸ್‍ಗಳನ್ನು ಹಾಗೂ ಸಾರಿಗೆ ಸಂಸ್ಥೆಯಿಂದ 50 ಬಸ್‍ಗಳು ನಿರಂತರ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಧಾರವಾಡದ ಗಾಂಧೀನಗರ, ವಿದ್ಯಾಗಿರಿ, ರೈಲ್ವೆಸ್ಟೇಷನ್, ಹೊಸ ಬಸ್‍ನಿಲ್ದಾಣ ಶ್ರೀನಗರ ವೃತ್ತ, ಕಲ್ಯಾಣ ನಗರ ಪ್ರದೇಶಗಳಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಕಲಾ ಮಹಾವಿದ್ಯಾಲಯದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗುತ್ತದೆ. ಕಾಲೇಜು ರಸ್ತೆ, ಜ್ಯುಬಿಲಿ ವೃತ್ತ, ಹಳೇ ಬಸ್‍ನಿಲ್ದಾಣ, ವಿವೇಕಾನಂದ ವೃತ್ತ, ಸಿಬಿಟಿ, ಮಹಾನಗರ ಪಾಲಿಕೆ ಕಚೇರಿ, ಗ್ರಾಮೀಣ ಬಿಇಒ ಕಚೇರಿ, ಹಳೇ ಡಿಎಸ್‍ಪಿ ವೃತ್ತ, ಉಪನಗರ ಪೊಲೀಸ್ ಠಾಣೆ, ಹೊಸ ಬಸ್‍ನಿಲ್ದಾಣ ಮಾರ್ಗವಾಗಿ ಕೃಷಿ ವಿದ್ಯಾಲಯ ಆವರಣಕ್ಕೆ ತಲುಪುತ್ತದೆ. ಸಾವಿರಾರು ಕಲಾವಿದರು ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಇರಲಿವೆ.
ಧಾರವಾಡದ ಜನ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರೊಂದಿಗೆ ಪ್ರೀತಿ-ವಿಶ್ವಾಸ-ಸಂಯಮದಿಂದ ವರ್ತಿಸೋಣ. ಶಾಂತಿಪ್ರಿಯ ಧಾರವಾಡದ ಪರಂಪರೆಯನ್ನು ಎತ್ತಿ ಹಿಡಿಯೋಣ. ಸಾಂಸ್ಕೃತಿಕ ನಾಡು ಎಂಬುದನ್ನು ಸಾಬೀತು ಪಡಿಸಲು ಇಲ್ಲಿನ ಜನ ಸಜ್ಜಾಗಿದ್ದಾರೆ.