ಕ್ರಿಕೆಟ್ ದೇವರ ಗುರು ರಮಾಕಾಂತ್ ಅಚ್ರೇಕರ್ ನಿಧನ 

ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಅವರ ಗುರು ರಮಾಕಾಂತ್ ಅಚ್ರೇಕರ್ ಇಹಲೋಕ ತ್ಯಜಿಸಿದ್ದದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಮಾಕಾಂತ್ ಅಚ್ರೇಕರ್ ಅವರಿಗೆ 86 ವರ್ಷ ವಯಸ್ಸಾಗಿತ್ತು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳೆಗೆ ರಮಾಕಾಂತ್ ಕೋಚ್ ಆಗಿದ್ರು.
ಸಚಿನ್ ಕ್ರಿಕೆಟ್ ದೇವರಾಗಲು ಶ್ರಮಿಸಿದ್ದ ರಮಕಾಂತ್
1932ರಲ್ಲಿ ಜನಿಸಿದ್ದ ಅಚ್ರೇಕರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಕೆರಿಯರ್ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ರು. ಸಚಿನ್‌ ತೆಂಡುಲ್ಕರ್ ಅವರನ್ನು ಅವರ ಶಾಲಾ ದಿನಗಳಲ್ಲಿ ಅವರ ಸಹೋದರ ಅಜಿತ್‌ ಮುಂಬೈ ಶಿವಾಜಿ ಪಾರ್ಕ್ನಲ್ಲಿ ಅಕಾಡೆಮಿ ನಡೆಸಿಕೊಂಡಿದ್ದ ಆಚ್ರೇಕರ್ ಅವರಿಗೆ ಪರಿಚಯಿಸಿದ್ರು. ಅದಾದ ಬಳಿಕ ಅವರ ಗರಡಿಯಲ್ಲಿ ಬೆಳೆದ ಸಚಿನ್ ಟೀಂ ಇಂಡಿಯಾದ ಓರ್ವ ಅದ್ಭುತ ಬ್ಯಾಟ್ಸ್ಮೆನ್ ಆಗಿ ರೂಪಗೊಂಡ್ರು.
ರಮಾಕಾಂತ್ ಗರಡಿಯಲ್ಲಿ ಪಳಗಿದ್ದ ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್ ಬಾಲ್ಯದ ಕೋಚ್ ಆಗಿದ್ದ ರಮಾಕಾಂತ್, ಸಚಿನ್ ಕ್ರಿಕೆಟ್ ಕರಿಯರ್ನಲ್ಲಿ ಮಹತ್ವದ ಪಾತ್ರವಹಿಸಿದ್ರು. ಬಾಲ್ಯದಲ್ಲಿ ರಮಾಕಾಂತ್ ಸಚಿನ್ಗೆ ಕ್ರಿಕೆಟ್ ಪಟ್ಟುಗಳನ್ನ ಕರಗತ ಮಾಡಿದ್ರು. ರಮಾಕಾಂತ್ ಗರಡಿಯಲ್ಲಿ ಪಳಗಿದ ಸಚಿನ್, ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ಆಗಿ ಕ್ರಿಕೆಟ್ ದುನಿಯಾದಲ್ಲಿ ಮೆರೆದಾಡಿದ್ರು.
ಗುರುಪೌರ್ಣಿಮೆ ದಿನ ಆರ್ಶೀವಾದ ಪಡೆಯುತ್ತಿದ್ದ ಸಚಿನ್ – ಕಾಂಬ್ಳಿ
ಸಚಿನ್ ತೆಂಡುಲ್ಕರ್ ಹಾಗೂ ವಿನೋದ್ ಕಾಂಬ್ಳೆ ಪ್ರತಿ ಗುರುಪೌರ್ಣಿಮೆ ದಿನ ಅಚ್ರೇಕರ್ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡು ಬರುತ್ತಿದ್ದರು. ಸಚಿನ್ ದೊಡ್ಡ ಸ್ಟಾರ್ ಆದ್ರೂ ಕಲಿಸಿದ ಗುರುವನ್ನ ಮರೆತಿರಲಿಲ್ಲ. ಮೊನ್ನೆ ಮೊನ್ನೆ ಕಾಂಬ್ಳೆ ಹಾಗೂ ಸಚಿನ್ ತೆಂಡುಲ್ಕರ್ ಹಳೆಯ ಮುನಿಸು ಮರೆತು ಒಂದಾಗಿದ್ದರು. ಹೊಸ ಕ್ರಿಕೆಟ್ ಅಕಾಡೆಮಿ ಪ್ರಾರಂಭಕ್ಕಾಗಿ ಇಬ್ಬರು ಗುರು ಅಚ್ರೇಕರ್ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಲ್ಲದೆ, ಹಳೆ ಮುನಿಸನ್ನು ಕೊನೆಗೊಳಿಸಿಕೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ