ಸ್ಟೀಲ್ ಬ್ರಿಡ್ಜ್ ಕಾಮಗಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ ಬಿಜೆಪಿ

ಬೆಂಗಳೂರು, ಜ.2- ಚಾಲುಕ್ಯ ವೃತ್ತದಿಂದ ಹೆಬ್ಬಾಳ ಫ್ಲೈಓವರ್‍ವರೆಗೂ ರಾಜ್ಯ ಸರ್ಕಾರ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಟೀಲ್ ಬ್ರಿಡ್ಜ್ ಕಾಮಗಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯ ಸರ್ಕಾರಕ್ಕೆ ನೇರ ಸವಾಲು ಹಾಕಿದೆ.

ಈ ಹಿಂದೆ ಪರಿಸರ ಪ್ರೇಮಿಗಳು, ಹೋರಾಟಗಾರರು ಸೇರಿದಂತೆ ಅನೇಕರ ಒತ್ತಡದಿಂದ ಸ್ಟೀಲ್‍ಬ್ರಿಡ್ಜ್ ನಿರ್ಮಾಣ ಮಾಡುವ ಯೋಜನೆಯನ್ನು ಕೈಬಿಡಲಾಗಿತ್ತು. ಪುನಃ ಯಾವ ಕಾರಣಕ್ಕಾಗಿ ಇದನ್ನು ಆರಂಭಿಸಲು ಸರ್ಕಾರ ಮುಂದಾಗಿದೆ ಎಂದು ಮಾಜಿ ಸಚಿವರಾದ ಕಟ್ಟಾಸುಬ್ರಹ್ಮಣ್ಯ ನಾಯ್ಡು ಮತ್ತು ಬಿ.ಜೆ.ಪುಟ್ಟಸ್ವಾಮಿ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲೇ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಮುಂದಾಗಿದ್ದರು. ಅಂದು ದೊಡ್ಡ ಮಟ್ಟದಲ್ಲಿ ಹೋರಾಟ ನಡೆದ ಪರಿಣಾಮ ಈ ಪ್ರಸ್ತಾವನೆಯಿಂದ ಹಿಂದೆ ಸರಿಯಲಾಗಿತ್ತು.

ಸರ್ಕಾರ ಪುನಃ ನಿರ್ಮಾಣ ಮಾಡಲು ಮುಂದಾದರೆ ಪರಿಸರ ಪ್ರೇಮಿಗಳು, ಪರಿಸರವಾದಿಗಳು, ಹೋರಾಟಗಾರರ ಸಹಾಯದಿಂದ ಮತ್ತೆ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಹುನ್ನಾರವನ್ನು ಕೈಬಿಡಬೇಕು. ಹಿಂದೆ ಇದೇ ಯೋಜನೆಗೆ ಅಂದಿನ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಎಚ್.ಡಿ.ಕುಮಾರಸ್ವಾಮಿಯವರು ವಿರೋಧ ವ್ಯಕ್ತಪಡಿಸಿದ್ದರು.ಈಗ ಅವರ ನಿಲುವು ಏಕೆ ಬದಲಾಗಿದೆ ಎಂದು ಕಟ್ಟಾಸುಬ್ರಹ್ಮಣ್ಯ ನಾಯ್ಡು ಪ್ರಶ್ನಿಸಿದರು.
ಶಿವಾನಂದ ವೃತ್ತದ ಬಳಿ ಸಂಚಾರ ದಟ್ಟಣೆ ನಿವಾರಿಸಲು ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕಾಗಿ 2 ವರ್ಷದಿಂದ ಕಾಮಗಾರಿ ಆರಂಭವಾಗಿದೆ.ಇನ್ನೂ ಇದನ್ನು ಮುಗಿಸಲು ಎಷ್ಟು ವರ್ಷ ಬೇಕೋ ದೇವರಿಗೆ ಗೊತ್ತು.ಆಮೆ ಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ನೋಡಿದರೆ ಇದಕ್ಕೆ ಇನ್ನು ದಶಕಗಳೇ ಬೇಕಾದರೂ ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಡಿದರು.

ಸಮ್ಮಿಶ್ರ ಸರ್ಕಾರಕ್ಕೆ ಬೆಂಗಳೂರು ಅಭಿವೃದ್ಧಿ ಬೇಕಿಲ್ಲ.ಕೇವಲ ಕಮಿಷನ್ ಬರುವ ಯೋಜನೆಗಳಿಗೆ ಮಾತ್ರ ಒತ್ತು ನೀಡುತ್ತದೆ.ಮಳೆಗಾಲದಲ್ಲಿ ರಸ್ತೆಗಳೆಲ್ಲ ಗುಂಡಿ ಬಿದ್ದು ಅನೇಕರು ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡರು.ವೈಟ್‍ಟಾಪಿಂಗ್ ಬಹುದೊಡ್ಡ ಮಾಫಿಯಾ ಎಂದು ದೂರಿದರು.

ಸಮ್ಮಿಶ್ರ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನೇ ಕಡೆಗಣಿಸಿರುವಾಗ ಬೆಂಗಳೂರು ಅಭಿವೃದ್ಧಿ ಮಾಡುತ್ತೇನೆ ಎಂದು ಹೊರಟಿರುವುದು ಮೂರ್ಖತನದ ಮಾತು. ಮೊದಲು ಸರ್ಕಾರದ ಬೊಕ್ಕಸಕ್ಕೆ ಬೆಂಗಳೂರಿನಿಂದ ಎಷ್ಟು ಆದಾಯ ಬರುತ್ತಿದೆ, ಅದರಲ್ಲಿ ಅಭಿವೃದ್ಧಿಗೆ ಎಷ್ಟು ವಿನಿಯೋಗವಾಗುತ್ತಿದೆ ಎಂದು ಹೇಳಿ. ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ.ಸಿದ್ದರಾಮಯ್ಯನವರು ಇದೇ ನೀತಿ ಅನುಸರಿಸಿದ್ದರಿಂದ ಕಾಂಗ್ರೆಸ್‍ಗೆ ಯಾವ ಸ್ಥಿತಿ ಬಂದಿದೆ ಗೊತ್ತಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ತಮ್ಮ ಜವಾಬ್ದಾರಿ ಅರಿತು ಮಾತನಾಡಿದರೆ ಉತ್ತಮ.ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಆಧಾರ ರಹಿತವಾಗಿ ಮಾತನಾಡುತ್ತಿದ್ದಾರೆ.ಅವರು ಕೀಳುಮಟ್ಟದ ಆರೋಪ ಮಾಡುವುದನ್ನು ನಿಲ್ಲಿಸಬೇಕು.ಮುಂದೆ ಇದೇ ರೀತಿ ಮಾತನಾಡಿದರೆ, ನಮಗೂ ಕೂಡ ಮಾತನಾಡಲು ಬರುತ್ತದೆ ಎಂದು ತಿರುಗೇಟು ನೀಡಿದರು.

ನೀವು ಬಳಸುವ ಭಾಷೆಯನ್ನೇ ನಾವು ಬಳಸಬೇಕಾಗುತ್ತದೆ.ಯಡಿಯೂರಪ್ಪ ಅವರ ರಾಜಕೀಯ ಅನುಭವ ಹಾಗೂ ವಯಸ್ಸಿಗೆ ಬೆಲೆ ಕೊಟ್ಟು ಮಾತನಾಡಬೇಕು. ಇಲ್ಲದಿದ್ದರೆ ನಿಮ್ಮ ಧಾಟಿಯಲ್ಲೇ ನಾವು ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಬರಿ ಮಲೆಗೆ ಮಹಿಳೆಯರು ಹೋದರೆ ಕಾನೂನು ಸಮಸ್ಯೆ ಉಂಟಾಗುತ್ತದೆ. ನಾವು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಆದರೆ ಕೆಲವು ಸಂದರ್ಭದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಹೇಳಿದರು.

ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ಹೀಗಾಗಿ ತಲಾ 14 ಲೋಕಸಭಾ ಕ್ಷೇತ್ರಕ್ಕೆ ಒಂದರಂತೆ ಒಬಿಸಿ ತಂಡ ರಾಜ್ಯ ಪ್ರವಾಸ ಮಾಡಲಿದೆ ಎಂದರು.

ಬೂತ್‍ಮಟ್ಟದಲ್ಲಿ 4,65,000 ಸಕ್ರಿಯ ಕಾರ್ಯಕರ್ತರಿದ್ದಾರೆ. ಜ.10 ರೊಳಗೆ ಬೂತ್‍ಮಟ್ಟದ ಸಮಿತಿ ರಚಿಸಲಾಗುವುದು.ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಲಿದ್ದೇವೆ. ನಾನು ಹಾಗೂ ಕೆ.ಎಸ್.ಈಶ್ವರಪ್ಪ ರಾಜ್ಯಾದ್ಯಂತ ಪ್ರವಾಸವನ್ನು ಆರಂಭಿಸಲಿದ್ದೇವೆ. ಫೆ.16 ಮತ್ತು 17 ರಂದು ಬಿಹಾರ ರಾಜಧಾನಿ ಪಾಟ್ನಾದಲ್ಲಿ ಒಬಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಫೆ.27ರಂದು ಯಡಿಯೂರಪ್ಪನವರ ಜನ್ಮದಿನದಂದು ರಾಜ್ಯದಲ್ಲಿ ಬೃಹತ್ ಸಮಾವೇಶ ಉದ್ದೇಶವಿಟ್ಟುಕೊಂಡಿರುವುದಾಗಿ ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅತಿ ಹೆಚ್ಚು ಸಂತಸ ಪಡುವವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಕಾರಣ ಅವರಿಗೆ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗಿಲ್ಲ. ರೈತರ ಸಾಲ ಮನ್ನಾ ಎನ್ನುವುದು ಕೇವಲ ಚುನಾವಣಾ ಗಿಮಿಕ್.ತಮ್ಮ ಹುಳುಕು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ