ಡಿಸಿಎಂ ಡಾ.ಪರಮೇಶ್ವರ ಅವರಿಂದ ಗೃಹ ಖಾತೆ ಕಸಿದುಕೊಂಡು ಅವರಿಗೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ದಲಿತ ಸಮಿತಿ

ಬೆಂಗಳೂರು, ಜ.2-ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಂದ ಗೃಹ ಖಾತೆಯನ್ನು ಕಸಿದುಕೊಂಡು ಅನ್ಯಾಯ ಮಾಡಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿವಿಧ ಸಂಯೋಜಕರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಸಮಿತಿಯ ರಾಜ್ಯ ಸಂಯೋಜಕ ಯಮರೆ ಶಂಕರ್, ರಾಜ್ಯ ಸಂಘಟನಾ ಸಂಯೋಜಕ ಕೆ.ನಾರಾಯಣಪ್ಪ, ಬೆಂಗಳೂರು ನಗರ ಜಿಲ್ಲಾ ಸಂಘಟನಾ ಸಂಯೋಜಕರಾದ ಆಂಜಿನಪ್ಪ, ಶ್ರೀರಾಮ್ ಮತ್ತಿತರರು ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಡಾ.ಜಿ.ಪರಮೇಶ್ವರ್ ಅವರು ಪಕ್ಷದ ಗೆಲುವಿಗೆ ಶ್ರಮಿಸಿದ್ದರು. ಅಂತಹ ನಾಯಕರಿಗೆ ಅಪಮಾನ ಮಾಡಲಾಗುತ್ತಿದೆ ಎಂದು ದೂರಿದರು.

ಗೃಹ ಖಾತೆ ಕಿತ್ತುಕೊಂಡು ಬೆಂಗಳೂರು ಅಭಿವೃದ್ಧಿ ಸ್ಥಾನ ನೀಡಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‍ನ ಪ್ರಬಲ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಉನ್ನತ ಸ್ಥಾನ ನೀಡಬೇಕು.ಈ ಇಬ್ಬರೂ ನಾಯಕರಿಗೆ ನ್ಯಾಯ ಒದಗಿಸದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಯಲಹಂಕ ವ್ಯಾಪ್ತಿಯ ಚಿಕ್ಕಜಾಲ ಹೋಬಳಿ, ಹುತ್ತನಹಳ್ಳಿ ಸರ್ವೆ ನಂ.23-72-73ರಲ್ಲಿ ಇರುವ ಗೋಮಾಳ ಜಮೀನಿನಲ್ಲಿ ಎಲ್ಲ ಜಾತಿಯ ಬಡವರಿಗೆ ಎಂಟು ದಿನದೊಳಗೆ ಹಕ್ಕು ಪತ್ರ ನೀಡಬೇಕೆಂದು ಯಮರೆ ಶಂಕರ್ ಸರ್ಕಾರವನ್ನು ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ