ಬೆಳಗಾವಿ : ಸಚಿವ ಸಂಪುಟದಿಂದ ಕೈ ಬಿಟ್ಟ ಹಿನ್ನಲೆ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗದಂತೆ ನಾಪತ್ತೆಯಾಗಿದ್ದರು. ಅವರ ಅಣ್ಣ ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರು ಅವರ ಸಂಪರ್ಕಕ್ಕೆ ಯತ್ನಿಸಿದ್ದರು ಅವರು ಸಿಕ್ಕಿರಲಿಲ್ಲ. ಅವರು ಇಂದು ತಮ್ಮ ಮನೆಯಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ.
ಕಳೆದ 9 ದಿನಗಳಿಂದ ನಿಗೂಢ ನಡೆ ಕಾಯ್ದುಕೊಂಡಿದ್ದ ರಮೇಶ್ ಎಲ್ಲಿದ್ದಾರೆ. ಏನು ಮಾಡುತ್ತಿದ್ದಾರೆ ಎಂಬ ಯಾವ ಮಾಹಿತಿ ಕೂಡ ಯಾರಿಗೂ ಇರಲಿಲ್ಲ. ಮೂಲಗಳ ಪ್ರಕಾರ ಅವರು ಮುಂಬೈನಿಂದ ದೆಹಲಿಗೆ ತೆರಳಿದ್ದರು ಎನ್ನಲಾಗಿದೆ. ಅವರು ಇಂದು ಮುಂಜಾನೆ ಗೋಕಾಕ್ನ ತಮ್ಮ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅವರು ಮನೆಯಿಂದ ಹೊರ ಹೋಗುತ್ತಿರುವುದು ಕಂಡು ಬಂದಿದೆ. ಗೋಕಾಕ್ನಿಂದ ಬೆಳಗಾವಿಗೆ ಅವರು ಬರುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ದೆಹಲಿಯಲ್ಲಿಯೇ ಇದ್ದುದ್ದರಿಂದ ಅಲ್ಲಿ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಮಲ ಪಾಳಯದ ಹಿರಿಯ ನಾಯಕರು ಕೂಡ ಸದ್ದಿಲ್ಲದಂತೆ ಬಂಡಾಯ ಸಾರಿದ್ದ ಮಾಜಿ ಸಚಿವರಿಗೆ ಪಕ್ಷಕ್ಕೆ ಆಹ್ವಾನಿಸಿತ್ತು ಎಂಬ ಸುದ್ದಿಗಳು ಕೂಡ ಹಬ್ಬಿದ್ದವು.
ಈ ಎಲ್ಲ ಅಂತೆ ಕಂತೆ ಹಾಗೂ ಸಚಿವ ಸ್ಥಾನದಿಂದ ಕೈ ಬಿಟ್ಟಿದ ಹಿನ್ನಲೆ ನಾಯಕರ ವಿರುದ್ಧ ನಾಯಕರ ಸಂಪರ್ಕಕ್ಕೆ ಸಿಗದೆ ತಮ್ಮ ನಿಲುವನ್ನು ಗೌಪ್ಯವಾಗಿಟ್ಟಿದ್ದ ರಮೇಶ್ ಶೀಘ್ರದಲ್ಲೇ ಇದಕ್ಕೆಲ್ಲಾ ಅಂತಿಮ ತೆರೆ ಎಳೆಯಬಹುದು ಎನ್ನಲಾಗಿದೆ.
ಪಕ್ಷದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ರಮೇಶ್ ಸಿಟ್ಟು 9 ದಿನಗಳ ನಂತರ ತಣ್ಣಗಾಯಿತಾ ಎಂಬ ಪ್ರಶ್ನೆ ಕೂಡ ಮೂಡಿದೆ. ಗೋಕಾಕ್ನಿಂದ ಬೆಳಗಾವಿಗೆ ಬರಲಿರುವ ಅವರು ತಮ್ಮ ನಿರ್ಧಾರದ ಕುರಿತು ವರಿಷ್ಠರೊಂದಿಗೆ ಮಾತುಕತೆ ನಡೆಸಿ, ಮುಂದಿನ ತಮ್ಮ ನಡೆ ಏನು ಎಂಬ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.