ಬೆಂಗಳೂರು, ಜ.2-ಹಿಂದೂ ಧರ್ಮ ಹಾಗೂ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಟೀಕೆ ಮಾಡಿರುವ ಸಾಹಿತಿ ಭಗವಾನ್ ವಿರುದ್ಧ ದೂರು ದಾಖಲಾಗಿದ್ದರೂ ಸರ್ಕಾರ ಯಾವುದೇ ಕ್ರಮಕೈಗೊಳ್ಳದಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಮರ್ಯಾದಾ ಪುರುಷೋತ್ತಮ ಶ್ರೀರಾಮ, ಪತ್ನಿ ಸೀತೆ, ಸಹೋದರ ಲಕ್ಷ್ಮಣ ಮದ್ಯಪಾನ ಸೇವನೆ ಮಾಡುತ್ತಿದ್ದರೆಂದು ಭಗವಾನ್ ತಮ್ಮ ಕೃತಿಯಲ್ಲಿ ಆರೋಪಿಸುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ. ರಾಜ್ಯದ ಆರು ಕಡೆ ಅವರ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೂ ಈವರೆಗೂ ಭಗವಾನ್ ಅವರನ್ನು ಏಕೆ ಬಂಧಿಸಿಲ್ಲ ಎಂದು ಬಿಜೆಪಿ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಪಕ್ಷದ ಸಹ ವಕ್ತಾರ ಎ.ಎಚ್.ಆನಂದ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಈ ಇಬ್ಬರು, ಭಗವಾನ್ ವಿರುದ್ಧ ದೂರು ದಾಖಲಾಗಿ ಎಫ್ಐಆರ್ ಕೂಡ ದಾಖಲಿಸಲಾಗಿದೆ. ಅವರ ವಿರುದ್ಧ ಯಾವುದೇ ಕಾನೂನು ಕ್ರಮಕೈಗೊಳ್ಳದಿರುವುದು ಸರ್ಕಾರ ರಕ್ಷಣೆ ಮಾಡಲು ಹೊರಟಿದೆ ಎಂಬ ಆಪಾದನೆ ಬರುತ್ತದೆ ಎಂದು ದೂರಿದ್ದಾರೆ.
ಈ ಹಿಂದೆ ಸಾಹಿತಿಗಳು ಇಷ್ಟು ಕೀಳುಮಟ್ಟದಲ್ಲಿ ಯಾವುದೇ ಒಂದು ಧರ್ಮ ಇಲ್ಲವೇ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವಂತಹ ಹೇಳಿಕೆಗಳನ್ನು ನೀಡುವುದಾಗಲಿ, ಇಲ್ಲವೆ ತಮ್ಮ ಕೃತಿಯಲ್ಲಿ ಉಲ್ಲೇಖಿಸುವುದಾಗಲಿ ಮಾಡಿರಲಿಲ್ಲ. ಆದರೆ ಭಗವಾನ್ ಪ್ರಚಾರ ಗಿಟ್ಟಿಸಿಕೊಳ್ಳುವ ಕಾರಣಕ್ಕಾಗಿಯೇ ಪುಸ್ತಕವನ್ನು ಹೊರತಂದಿದ್ದಾರೆ ಎಂದು ಟೀಕಿಸಿದ್ದಾರೆ.
ರಾಷ್ಟ್ರಕವಿ ಹಾಗೂ ವಿಶ್ವ ಮಾನವ ಸಂದೇಶ ಸಾರಿದ ರಸಋಷಿ ಕುವೆಂಪು ಶ್ರೀ ರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಎಲ್ಲಿಯೂ ಆದರ್ಶ ಪುರುಷ ಶ್ರೀರಾಮ, ಸೀತೆ, ಲಕ್ಷ್ಮಣ ಸೇರಿದಂತೆ ಯಾರೊಬ್ಬರಿಗೂ ಅವಮಾನ ಮಾಡಿಲ್ಲ. ಇದಕ್ಕಾಗಿಯೇ ಆ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯೂ ಸಹ ದೊರಕಿತ್ತು.ಆದರೆ ಭಗವಾನ್ ಶ್ರೀರಾಮಾಯಣದರ್ಶನಂಗೂ ಮಿಗಿಲಾದ ಕೃತಿಯನ್ನು ರಚಿಸಿದ್ದೇನೆಂಬ ಹುಂಬತನದಲ್ಲಿದ್ದಾರೆ.
ಇತಿಹಾಸದಲ್ಲಿ ಈವರೆಗೂ ರಾಮಾಯಣ ಕುರಿತು ಬಂದಿರುವ ವಿವಿಧ ಭಾಷೆಗಳ ಸಾಹಿತ್ಯದಲ್ಲಿ ಎಲ್ಲಿಯೂ ಶ್ರೀರಾಮನನ್ನು ಅಪಮಾನ ಮಾಡಿಲ್ಲ. ಭಗವಾನ್ ಅವರು ಯಾವ ಆಧಾರದ ಮೇಲೆ ಆರೋಪ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇದು ದೈವ ಇಚ್ಛೆಯ ಸರ್ಕಾರ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪದೇ ಪದೇ ಹೇಳುತ್ತಾರೆ.ದೇವರು, ಧರ್ಮ, ಆಚಾರ, ವಿಚಾರ, ಸಂಪ್ರದಾಯದ ಬಗ್ಗೆ ಅಷ್ಟೊಂದು ಗೌರವವಿದ್ದರೆ ಭಗವಾನ್ ಅವರನ್ನು ಬಂಧಿಸಲು ಇನ್ನೂ ಏಕೆ ಮೀನಾಮೇಷ ಎಂದು ಸಿ.ಟಿ.ರವಿ ಮತ್ತು ಎ.ಎಚ್.ಆನಂದ್ ಆಕ್ರೋಶ ಹೊರಹಾಕಿದ್ದಾರೆ.
ಇಸ್ಲಾಂ ಧರ್ಮವನ್ನು ಟೀಕಿಸಿದರು ಎಂಬ ಕಾರಣಕ್ಕಾಗಿ ರಾತ್ರೋರಾತ್ರಿ ಪತ್ರಕರ್ತರೊಬ್ಬರನ್ನು ಬಂಧಿಸಲು ಸಾಧ್ಯವಾಗುವುದಾದರೆ 6 ಕಡೆ ಎಫ್ಐಆರ್ ದಾಖಲಾಗಿದ್ದರೂ ಭಗವಾನ್ ಬಂಧಿಸದಿರಲು ಹಿಂದಿರುವ ಮರ್ಮವಾದರೂ ಏನು? ಕೂಡಲೇ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.