ಮೊದಲ ಬಾರಿಗೆ ನೇರವಾಗಿ ಆಖಾಡಕ್ಕೆ ಇಳಿದ ಕೇಂದ್ರ ಬಿಜಪಿ ವರಿಷ್ಟರು

ಬೆಂಗಳೂರು, ಜ.2-ಆಡಳಿತರೂಢ ದೋಸ್ತಿ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಈವರೆಗೂ ಸುರಕ್ಷಿತ ಅಂತರದಲ್ಲಿದ್ದ ಕೇಂದ್ರ ಬಿಜೆಪಿ ವರಿಷ್ಠರು ಮೊದಲ ಬಾರಿಗೆ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.

ಶತಾಯಗತಾಯ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಲೋಕಸಭೆ ಚುನಾವಣೆಗೂ ಮುನ್ನವೇ ಅಸ್ಥಿರಗೊಳಿಸಿ ಬಿಜೆಪಿ ನೇತೃತ್ವದ ಸರ್ಕಾರವನ್ನು ರಚಿಸಲು ಬಿಜೆಪಿ ನಾಯಕರು ತೆರೆ ಮರೆಯಲ್ಲಿ ಆಟ ಪ್ರಾರಂಭಿಸಿದ್ದಾರೆ.

ಈವರೆಗೂ ರಾಜ್ಯ ಬಿಜೆಪಿ ನಾಯಕರು ಏನೇ ಹೇಳಿದರೂ ದೆಹಲಿ ನಾಯಕರು ಮಾತ್ರ ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಪ್ರಯತ್ನವನ್ನು ಮಾಡಿರಲಿಲ್ಲ. ಎರಡೂ ಪಕ್ಷಗಳ ಶಾಸಕರ ಮುನಿಸು ಬೀದಿಗೆ ಬರುವವರೆಗೂ ಅಂತಹ ಯಾವುದೇ ಪ್ರಯತ್ನ ನಮ್ಮಿಂದ ಆಗಬಾರದೆಂಬ ದೃಢ ನಿಲುವಿಗೆ ಬಂದಿದ್ದರು.

ಇದೀಗ ಸಚಿವ ಸಂಪುಟ ವಿಸ್ತರಣೆ ನಂತರ ಸ್ಥಾನ ಕಳೆದುಕೊಂಡು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಇದುವರೆಗೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಹೋದರರಾದ ಸತೀಶ್ ಜಾರಕಿ ಹೊಳಿ, ಲಖನ್ ಜಾರಕಿ ಹೊಳಿ ಸೇರಿದಂತೆ ಅನೇಕರು ಸತತ ಪ್ರಯತ್ನಪಟ್ಟರೂ ಸಂಪರ್ಕಕ್ಕೆ ಸಿಗುತ್ತಿಲ್ಲ.

ಈಗ ಕಾಂಗ್ರೆಸ್‍ನ ಒಳಜಗಳವನ್ನೇ ಲಾಭ ಮಾಡಿಕೊಳ್ಳಲು ಹಪಹಪಿಸುತ್ತಿರುವ ಬಿಜೆಪಿ ಕನಿಷ್ಠ 13 ರಿಂದ 16 ಶಾಸಕರನ್ನು ಸೆಳೆಯುವ ಕಾರ್ಯಕ್ಕೆ ಕೈ ಹಾಕಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಪ್ರಭಾವಿ ವಾಲ್ಮೀಕಿ ಸಮುದಾಯದ ಸಚಿವರೊಬ್ಬರ ಮೂಲಕ ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ನಿರಂತರವಾಗಿ ಮುಂದುವರೆದಿದೆ.

ಆದರೆ ನಿರೀಕ್ಷಿತ ಮಟ್ಟದಲ್ಲಿ ಶಾಸಕರ ಸಂಖ್ಯೆ ಹೆಚ್ಚಾಗದ ಕಾರಣ ಸರ್ಕಾರ ಅಸ್ಥಿರಗೊಳಿಸುವ ಆಪರೇಷನ್ ಕಮಲ ತುಸು ಮಟ್ಟಿಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

ಇದುವರೆಗೂ ರಮೇಶ್ ಜಾರಕಿ ಹೊಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಅವರನ್ನು ಭೇಟಿ ಮಾಡುವ ತವಕದಲ್ಲಿದ್ದಾರೆ.ಆದರೆ ಬಿಜೆಪಿಯ ಚುನಾವಣಾ ಚಾಣಕ್ಯ ಅವಕಾಶ ನೀಡಿಲ್ಲ.

ಕೇವಲ ಮೂರ್ನಾಲ್ಕು ಮಂದಿ ಶಾಸಕರು ಬಂದರೆ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಇದರಿಂದ ಬಿಜೆಪಿಗೆ ಅನುಕೂಲವೂ ಆಗುವುದಿಲ್ಲ. ಕನಿಷ್ಠ ಪಕ್ಷ 15 ಮಂದಿ ಶಾಸಕರು ಏಕಕಾಲಕ್ಕೆ ಪಕ್ಷ ತೊರೆದರೆ ಸರ್ಕಾರವನ್ನು ಅಸ್ಥಿರಗೊಳಿಸಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ ಬಿಜೆಪಿ ನಾಯಕರು.

ದೋಸ್ತಿ ಸರ್ಕಾರ ಮುಂದುವರೆದಷ್ಟು ಲೋಕಸಭೆ ಚುನಾವಣೆಗೆ ಹಿನ್ನೆಡೆಯಾಗಬಹುದೆಂಬ ಕಾರಣಕ್ಕಾಗಿಯೇ ಎಷ್ಟು ಸಾಧ್ಯವೋ ಅಷ್ಟರೊಳಗೆ ಸರ್ಕಾರವನ್ನು ಪತನಗೊಳಿಸುವ ರಣೋತ್ಸವದಲ್ಲಿ ಬಿಜೆಪಿ ಇದೆ.

ಬಳ್ಳಾರಿಯ ಬಿ.ನಾಗೇಂದ್ರ, ಆನಂದ್‍ಸಿಂಗ್, ಗಣೇಶ್, ಪ್ರತಾಪ್‍ಗೌಡ ಪಾಟೀಲ್, ಬಸವರಾಜ ದದ್ದೂರ್, ಬಿ.ಸಿ.ಪಾಟೀಲ್, ಬಿ.ಕೆ.ಸಂಗಮೇಶ್, ಮಹೇಶ್ ಕುಮುಟಹಳ್ಳಿ, ಶ್ರೀಮಂತ ಪಾಟೀಲ ಸೇರಿದಂತೆ ಸುಮಾರು ಒಂದು ಡಜನ್‍ಗೂ ಅಧಿಕ ಶಾಸಕರು ರಮೇಶ್ ಜಾರಕಿ ಹೊಳಿ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದಾರೆ.

ನಾವು ಕಾಂಗ್ರೆಸ್ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಈ ಶಾಸಕರು ಹೇಳುತ್ತಿದ್ದರಾದರೂ ಒಳಗೊಳಗೇ ಪಕ್ಷಕ್ಕೆ ಕೈ ಕೊಡಲು ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಾಗೇಂದ್ರ ಹಾಗೂ ಆನಂದ್‍ಸಿಂಗ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕಾಂಗ್ರೆಸ್‍ನ ಭಿನ್ನಮತೀಯರನ್ನು ಸೆಳೆಯಲು ಈ ಬಾರಿ ಜಾರಕಿ ಹೊಳಿ ಅವರ ಮತ್ತೋರ್ವ ಸಹೋದರ ಬಾಲಚಂದ್ರ ಜಾರಕಿ ಹೊಳಿ ನೇತೃತ್ವ ವಹಿಸಿದ್ದಾರೆ ಎನ್ನಲಾಗುತ್ತಿದೆ.

ಗೌಪ್ಯ ಸ್ಥಳದಲ್ಲಿ ಭಿನ್ನಮತೀಯರನ್ನು ಒಗ್ಗೂಡಿಸುವುದು ಹಾಗೂ ಇವರೆಲ್ಲರನ್ನು ದೆಹಲಿಗೆ ಕರೆದೊಯ್ದು ಏಕಕಾಲದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅಗತ್ಯ ವೇದಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಬಾಲಚಂದ್ರ ಜಾರಕಿ ಹೊಳಿ ವಹಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ನೇರವಾಗಿ ಬಿಜೆಪಿಯಿಂದ ಸರ್ಕಾರ ಪತನವಾಯಿತು ಎಂಬ ಟೀಕೆಯಿಂದ ತಪ್ಪಿಸಿಕೊಳ್ಳಲು ಕಮಲ ನಾಯಕರು ಗೌಪ್ಯವಾಗಿ ಹೊರಗಿನ ನಾಯಕರಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಒಂದೆರಡು ದಿನಗಳಲ್ಲಿ ಇದರ ಮರ್ಮ ಹೊರಬೀಳುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ