ಮರುಜೀವ ಪಡೆದ ಸ್ಟೀಲ್ ಬ್ರಿಡ್ಜ್ ಯೋಜನೆ

ಬೆಂಗಳೂರು, ಜ.1- ತೀವ್ರ ವಿವಾದಕ್ಕೆ ಕಾರಣವಾಗಿದ್ದ ನಗರದ ಸ್ಟೀಲ್‍ಬ್ರಿಡ್ಜ್ ಯೋಜನೆಗೆ ಮರುಜೀವ ಸಿಕ್ಕಂತಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರ ಕೈ ಬಿಟ್ಟಿದ್ದ ಈ ಯೋಜನೆಯನ್ನು ಪುನಃ ಆರಂಭಿಸಲು ಚಿಂತನೆ ನಡೆಸಿರುವುದಾಗಿ ನಗರಾಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ

ಭ್ರಷ್ಟಾಚಾರದ ಆರೋಪ, ಪರಿಸರ ವಾದಿಗಳ ಮತ್ತು ಪ್ರತಿಪಕ್ಷಗಳ ವಿರೋಧ ಹಾಗೂ ಕಾನೂನಾತ್ಮಕ ತೊಂದರೆಯಿಂದ ಕೈ ಬಿಡಲಾಗಿದ್ದ ಸಿದ್ದರಾಮಯ್ಯ ಅವರ ಸರ್ಕಾರದ ಮಹತ್ವಾಕಾಂಕ್ಷಿ ಸ್ಟೀಲ್‍ಬ್ರಿಡ್ಜ್ ಯೋಜನೆಯನ್ನು ಮರು ಜಾರಿ ಗೊಳಿಸಲು ಸಮ್ಮಿಶ್ರ ಸರ್ಕಾರ ಮುಂದಾಗಿದೆ.

ಈ ಸಂಬಂಧ ಇಂದುಉಪಮುಖ್ಯಮಂತ್ರಿ ಪರಮೇಶ್ವರ್ ತಮ್ಮ ನಿವಾಸದಲ್ಲಿ ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಭೇಟಿ ನೀಡಿ ಹೊಸ ವರ್ಷಾಚರಣೆ ಶುಭಾಶಯ ಕೋರಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ಪ್ರಸ್ತಾಪಿಸಿದರು.

ಈ ಯೋಜನೆ ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಯಲಿದ್ದು, ವಿಸ್ತೃತ ವರದಿಯನ್ನು ಸಾರ್ವಜನಿಕರ ಮುಂದೆ ಇಡಲಿದ್ದೇವೆ. ಅವರ ತೀರ್ಮಾನವೇ ಅಂತಿಮವಾಗಲಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಬ್ಬಾಳದ ಎಸ್ಟಿಂ ಮಾಲ್‍ನಿಂದ ಚಾಲುಕ್ಯ ವೃತ್ತದವರೆಗೆ ಸದರಿ ಯೋಜನೆ ಜಾರಿಗೆ ನಿರ್ಣಯಿಸಲಾಗಿತ್ತು. ಈ ವೇಳೆ ಪರಿಸರವಾದಿಗಳು ಹಾಗೂ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಆರೋಪಿಸಿ ಪರಿಸರವಾದಿಗಳು ಹಸಿರು ನ್ಯಾಯಾಧಿಕರಣದ ಮೊರೆ ಹೋಗಿದ್ದರು. ಈ ಯೋಜನೆ ಬಗ್ಗೆ ವ್ಯಾಪಕ ಭ್ರಷ್ಟಾಚಾರ ಆರೋಪವೂ ಕೇಳಿಬಂದಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಯೋಜನೆಯನ್ನು ಅಂದಿನ ಸರ್ಕಾರ ಕೈಬಿಟ್ಟಿತ್ತು.

ಇದೀಗ ಪರಮೇಶ್ವರ್ ಅವರು, ಯೋಜನೆಯನ್ನು ಮರು ಜಾರಿ ಮಾಡುವುದಾಗಿ ಹೇಳಿದ್ದಾರೆ. ಸಾರ್ವಜನಿಕರ ಸಲಹೆ ಪಡೆದು ಅನುಕೂಲವಾಗುವುದಿದ್ದರೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಏನಿದು ಸ್ಟೀಲ್ ಬ್ರಿಡ್ಜ್?
ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೆಬ್ಬಾಳದ ಎಸ್ಟಿ ಮಾಲ್‍ನಿಂದ ಚಾಲುಕ್ಯ ವೃತ್ತದವರೆಗೆ 1856 ಕೋಟಿ ವೆಚ್ಚದ 6.7 ಕಿ.ಮೀ ಉದ್ದದ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿತ್ತು.

ಈ ಯೋಜನೆ ಜಾರಿಯಾಗುವ ಆರಂಭದಲ್ಲೇ ಅಂದಿನ ಸರ್ಕಾರದ ಮೇಲೆ ಕಿಕ್ ಬ್ಯಾಕ್ ಆರೋಪ ಕೇಳಿಬಂದಿತ್ತು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಯೋಜನೆ ಸಂಬಂಧ 65 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಪ್ರತಿಪಕ್ಷ ಬಿಜೆಪಿ ಮಾಡಿತ್ತು. ಅಲ್ಲದೇ ಈ ಯೋಜನೆ ಜಾರಿಯಿಂದ ಪರಿಸರಕ್ಕೆ ಹಾನಿಯಾಗುತ್ತದೆ.

ಮರಗಳ ಮಾರಣ ಹೋಮವಾಗಲಿದೆ ಎಂದು ಪರಿಸರ ವಾದಿಗಳು ಪ್ರತಿಭಟನೆ ನಡೆಸಿದ್ದರು. ಎನ್‍ಜಿಟಿಯಿಂದ ತಡೆಯಾಜ್ಞೆಯನ್ನೂ ತಂದಿದ್ದರು. ಹಾಗಾಗಿ ಯೋಜನೆ ವಿಳಂಬವಾಗಿತ್ತು.

ವಿಮಾನ ನಿಲ್ದಾಣದಕ್ಕೆ ಸಂಚಾರ ದಟ್ಟಣೆ ತಪ್ಪಿಸಲು ಜಾರಿಗೊಳಿಸಲು ಯೋಜಿಸಿದ್ದ ಈ ಯೋಜನೆ ಸಾಕಷ್ಟು ವಿವಾದಕ್ಕೆ ಈಡಾಗಿ ಕಡೆಗೆ ಯೋಜನೆಯನ್ನೇ ಕೈಬಿಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ