ಬಿಜೆಪಿಯವರ ಕುದುರೆ ವ್ಯಾಪಾರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಡಿಸಿಎಂ.ಡಾ.ಪರಮೇಶ್ವರ್

ಬೆಂಗಳೂರು, ಜ.1-ಬಿಜೆಪಿಯವರ ಕುದುರೆ ವ್ಯಾಪಾರ ನಡೆಸಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುದುರೆ ವ್ಯಾಪಾರದಲ್ಲಿ ಬಿಜೆಪಿಯವರು ನಿಸ್ಸೀಮರು. ಆದರೆ ಅದು ಯಶಸ್ವಿಯಾಗುವುದಿಲ್ಲ. 2007ರಲ್ಲೇ ಅವರು ಕುದುರೆ ವ್ಯಾಪಾರ ಮಾಡಿದ್ದರು. ಇತ್ತೀಚೆಗೆ 2018ರ ಚುನಾವಣೆಯಲ್ಲೂ ಕುದುರೆ ವ್ಯಾಪಾರ ನಡೆಸುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಈಗ ಮತ್ತೆ ಅದೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಕೆಲವು ಶಾಸಕರನ್ನು ದೆಹಲಿಯಲ್ಲಿರಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಯಾವುದೇ ಪ್ರಯತ್ನ ಮಾಡಿದರೂ ಅದು ವಿಫಲ ಯತ್ನವಷ್ಟೇ. ಯಾರೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಸರ್ಕಾರ ಸುಭದ್ರವಾಗಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಸರ್ಕಾರದ ಪರವಾಗಿ ಹೊಸ ವರ್ಷದ ಶುಭಾಶಯ ಕೋರಿದ ಪರಮೇಶ್ವರ್‍ಅವರು, 2018ರಲ್ಲಿ ಭೀಕರ ಬರಗಾಲ ಅನುಭವಿಸಿದ್ದೇವೆ. ಮುಂದಿನ ವರ್ಷ ಉತ್ತಮ ಮಳೆಯಾಗಿ ಸುಖ, ಸಮೃದ್ಧಿ ನೆಲೆಸಿ ರಾಜ್ಯ ಸರ್ಕಾರ 2019ರ ಬಜೆಟ್‍ನ್ನು ಆಧರಿಸಿ ಇನ್ನಷ್ಟು ಉತ್ತಮ ಕೆಲಸಗಳಿಗೆ ಒತ್ತು ನೀಡಲಿದೆ. ಕೃಷಿ ಸಾಲ ಮನ್ನಾ ಯೋಜನೆ ಬರಪೀಡಿತ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ