ಜಿಲ್ಲಾ ಉಸ್ತುವಾರಿ ಪಡೆಯಲು ಸಚಿವರುಗಳ ಲಾಬಿ ಒಂದೆಡೆಯಾದರೆ, ಅತೃಪ್ತರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮತ್ತೊಂದೆಡೆ

ಬೆಂಗಳೂರು, ಜ.1- ಜಿಲ್ಲಾ ಉಸ್ತುವಾರಿ ಪಡೆಯಲು ಸಚಿವರುಗಳು ಒಂದೆಡೆ ಲಾಬಿ ನಡೆಸುತ್ತಿದ್ದರೆ, ಮತ್ತೊಂದೆಡೆ ಅತೃಪ್ತರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಇನ್ನೊಂದೆಡೆ ಅತೃಪ್ತರನ್ನು ಮನವೊಲಿಸುವ ಪ್ರಯತ್ನಗಳು ತೀವ್ರಗೊಂಡಿವೆ.

ಕಳೆದ 11 ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದಿರುವ ರಮೇಶ್ ಜಾರಕಿಹೊಳಿ ಜತೆ ಹಲವು ಅತೃಪ್ತ ಶಾಸಕರು ಇದ್ದಾರೆ. ಅವರಿಂದ ಸಮ್ಮಿಶ್ರ ಸರ್ಕಾರಕ್ಕೆ ಆಪತ್ತು ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಮನವೊಲಿಸುವ ಪ್ರಯತ್ನಗಳು ತೀವ್ರಗೊಂಡಿವೆ.

ರಮೇಶ್ ಜಾರಕಿಹೊಳಿ ಅವರ ಸಹೋದರ ಲಖನ್ ಜಾರಕಿಹೊಳಿ ಅವರ ಆಪ್ತರು ಹಾಗೂ ಅಥಣಿ ಶಾಸಕರಾದ ಮಹೇಶ್ ಕುಮಟಹಳ್ಳಿ ಅವರು ರಮೇಶ್ ಜಾರಕಿಹೊಳಿ ಅವರನ್ನು ಹೈಕಮಾಂಡ್ ಮನವೊಲಿಸಬೇಕು.

ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿರುವ ಬೆನ್ನಲ್ಲೇ ಅತೃಪ್ತರ ಅಸಮಾಧಾನ ತಣಿಸಲು ಹೈಕಮಾಂಡ್ ನಾಯಕರು ಮುಂದಾಗಿದ್ದಾರೆ.

ಅತ್ತ ರಮೇಶ್ ಜಾರಕಿಹೊಳಿ ಯಾರ ಸಂಧಾನಕ್ಕೂ ಬಗ್ಗದೆ, ಯಾರ ಕೈಗೂ ಸಿಗದೆ ನವದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಭೇಟಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.

ಕನಿಷ್ಠ 15 ಶಾಸಕರೊಂದಿಗೆ ಬಂದರೆ ಭೇಟಿಗೆ ಅವಕಾಶ ನೀಡುವುದಾಗಿ ಅಮಿತ್ ಷಾ ಹೇಳಿದ್ದಾರೆ ಎನ್ನಲಾಗಿದೆ. ಇನ್ನೂ 15 ಶಾಸಕರು ಒಟ್ಟಾಗಿಲ್ಲ. ಸಂಕ್ರಾಂತಿ ವೇಳೆಗೆ ಅತೃಪ್ತರನ್ನು ಒಟ್ಟುಗೂಡಿಸಿ ರಾಜೀನಾಮೆ ಕೊಡಿಸಿ ಸರ್ಕಾರವನ್ನು ಅಲ್ಪಮತಕ್ಕೆ ಇಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಜ.26ರಂದು ನಡೆಯಲಿರುವ ಜಂಟಿ ಅಧಿವೇಶನದ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಸೂಪರ್‍ಪ್ಲಾನ್‍ವೊಂದನ್ನು ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್-ಜೆಡಿಎಸ್ ಕೂಡ ಪ್ರತಿತಂತ್ರ ಹೆಣೆದಿವೆ.

ಸರ್ಕಾರವನ್ನು ಅಸ್ಥಿರಗೊಳಿಸಲು ಕನಿಷ್ಠ 18 ರಿಂದ 20 ಶಾಸಕರು ರಾಜೀನಾಮೆ ಕೊಡಬೇಕಾಗುತ್ತದೆ. ಪ್ರಸ್ತುತ ಲೋಕಸಭೆ ಚುನಾವಣೆ ಎದುರಾಗುತ್ತಿದ್ದು, ಈ ಸಂದರ್ಭದಲ್ಲಿ ಇಷ್ಟು ಪ್ರಮಾಣದ ಶಾಸಕರು ಏಕಕಾಲದಲ್ಲಿ ರಾಜೀನಾಮೆ ಕೊಡುತ್ತಾರೆಯೇ ಎಂಬ ಅನುಮಾನ ಕಾಡುತ್ತಿದೆ.

ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಗುಪ್ತ್ ಗುಪ್ತ್ ಚಟುವಟಿಕೆಗಳು ನಡೆಯುತ್ತಿವೆ. ಈವರೆಗೆ ಆಪರೇಷನ್ ಕಮಲದ ಬಗ್ಗೆ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದ ಬಿಜೆಪಿ ನಾಯಕರು ಈಗ ನಾವು ಇಂತಹ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಲೇ ಅತೃಪ್ತರನ್ನು ಸೆಳೆಯುವ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು, ಟ್ವಿಟ್ ವಾರ್‍ಗಳು ನಡೆಯುತ್ತಿವೆ. ಸಂಪುಟ ವಿಸ್ತರಣೆ ಪುನಾರಚನೆ, ಖಾತೆ ಹಂಚಿಕೆ ಬಿಕ್ಕಟ್ಟು ಮುಗಿದ ಮೇಲೆ ಉಂಟಾಗಿರುವ ಭಿನ್ನಮತ ಸಮ್ಮಿಶ್ರ ಸರ್ಕಾರಕ್ಕೆ ಮಾರಕವಾಗಿ ಪರಿಣಮಿಸಿದ್ದು, ಸಚಿವ ಸ್ಥಾನ ಸಿಗದೆ ಅತೃಪ್ತರಾಗಿರುವ ಬಣದವರ ನಡೆಯಿಂದ ಯಾವ ಪರಿಣಾಮ ಬೀರುತ್ತದೆ, ಮನವೊಲಿಕೆಗೆ ಮಣಿಯುತ್ತಾರೆಯೇ ಅಥವಾ ಅವರ ನಡೆ ಪ್ರತಿಪಕ್ಷಕ್ಕೆ ವರದಾನವಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ